ಆರ್ಆರ್ಆರ್ ಖ್ಯಾತಿಯ ರಾಮ್ ಚರಣ್ ಸೂಪರ್ ಸ್ಟಾರ್ ಅಲ್ಲದೇ ಫ್ಯಾಮಿಲಿ ಮ್ಯಾನ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಉಪಾಸನಾ ಕೊನಿಡೇಲಾ ಜೊತೆ ಆದರ್ಶ ವೈವಾಹಿಕ ಜೀವನ ಸಾಗಿಸುತ್ತಿದ್ದು, ಈ ದಂಪತಿ ಅದೆಷ್ಟೋ ಯುವ ಮನಸುಗಳಿಗೆ ಸ್ಫೂರ್ತಿಯಾಗಿದ್ದಾರೆ. ಆಗಾಗ್ಗೆ ಸ್ಪೆಷಲ್ ಪೋಸ್ಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಈ ದಂಪತಿ ಗಮನ ಸೆಳೆಯುತ್ತಿರುತ್ತಾರೆ.
ನಿನ್ನೆಯಷ್ಟೇ, ಮಾರ್ಚ್ 1ರಂದು ರಾಮ್ ಚರಣ್ ದಂಪತಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್ ಸೆಲೆಬ್ರೇಶನ್ಗಾಗಿ ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣ ಬೆಳೆಸಿದ ವಿಡಿಯೋಗಳು ಸಖತ್ ಸದ್ದು ಮಾಡಿದ್ದವು. ಇದೀಗ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ವಿಮಾನಯಾನದ ಸಂದರ್ಭ ರಾಮ್ ಚರಣ್ ಅವರು ಪತ್ನಿ ಉಪಾಸನಾ ಅವರ ಪಾದಗಳನ್ನು ಮೃದುವಾಗಿ ಮಸಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪತ್ನಿ ಮೇಲಿನ ಕಾಳಜಿ ಕಂಡ ಅಭಿಮಾನಿಗಳು ನಟನ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೆಸ್ಟ್ ಹಬ್ಬಿ ಎಂಬ ಅವಾರ್ಡ್ ಕೊಡಬೇಕೆಂದು ಕೆಲವರು ತಿಳಿಸಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ಶಾಲಾ ದಿನಗಳಿಂದಲೂ ಪರಿಚಿತರು. 2011ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ 2012ರಲ್ಲಿ ಹಸೆಮಣೆ ಏರಿದರು. ಮದುವೆಯಾಗಿ 10 ವರ್ಷಗಳ ಬಳಿಕ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಕಳೆದ ವರ್ಷವಷ್ಟೇ ಮೆಗಾಸ್ಟಾರ್ ಚಿರಂಜೀವಿ ಮನೆಗೆ ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾಳೆ. 2023ರ ಜೂನ್ 20ರಂದು ಹೆಣ್ಣು ಮಗು ಜನಿಸಿದ್ದು, ಕ್ಲಿನ್ ಕಾರ ಕೊನಿಡೇಲಾ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಅನಂತ್ ಅಂಬಾನಿ ಗ್ರ್ಯಾಂಡ್ ಪ್ರೀ ವೆಡ್ಡಿಂಗ್ ಸೆಲೆಬ್ರೇಶನ್ ಫೋಟೋಗಳಿಲ್ಲಿವೆ ನೋಡಿ
ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವಿರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜೋಡಿಯ ಪ್ರೀ ವೆಡ್ಡಿಂಗ್ ಸೆಲೆಬ್ರೇಶನ್ ನಡೆಯುತ್ತಿದೆ. ನಿನ್ನೆ, ಮಾರ್ಚ್ 1ರಂದು ಕಾರ್ಯಕ್ರಮ ಆರಂಭವಾಗಿದ್ದು, ನಾಳೆ - ಮಾರ್ಚ್ 3ರ ವರೆಗೆ ವಿವಾಹಪೂರ್ವ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಸಿನಿಮಾ, ಕ್ರಿಕೆಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಕೂಡ ಭಾಗಿಯಾಗಿದ್ದು, ಕೆಲ ವಿಡಿಯೋಗಳು ವೈರಲ್ ಆಗಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಭೇಟಿಯಾದ ಜೂ.ಎನ್ಟಿಆರ್
ರಾಮ್ ಚರಣ್ ಮುಂದಿನ ಬಹುನಿರೀಕ್ಷಿತ ಚಿತ್ರ ''ಗೇಮ್ ಚೇಂಜರ್''. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ ತೆಲುಗು, ತಮಿಳು ಮತ್ತು ಹಿಂದಿ ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.