ರಾಜ್‌ಕುಮಾರ್ ಎಂಬ ದಂತಕಥೆ ಪ್ರೀತಿಗಳಿಸಿ, ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೊರಟ ದುರಂತ ಕಣ್ಣಮುಂದೆಯೇ ಇದೆ. ಆದರೆ ರಾಜ್ ಎಂಬ ದಿವ್ಯ ಜ್ಯೋತಿ ಎಲ್ಲರ ಮನಸ್ಸುಗಳಲ್ಲಿ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯಾಗಿ ದೊಡ್ಮನೆ ರಾಜನ ಸಿನಿಮಾಗಳು, ಕನಸುಗಳು ಕಾಡುತ್ತಲೇ ಇರುತ್ತವೆ. ರಾಜ್‌ಕುಮಾರ್ ಎಂದೆಂದಿಗೂ ಶಾಶ್ವತ ಎಂಬ ಮಾತು ಕರುನಾಡ ಹೃದಯಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ. ರಾಜ್ ಎಂಬ ಹಿಸ್ಟರಿ ನಮ್ಮನ್ನಗಲಿ 18 ವರ್ಷಗಳಾಯ್ತಾ? ಎಂಬ ಕಹಿಸತ್ಯ ಈಗಲೂ ಕಣ್ಣಮುಂದೆ ಬರುತ್ತಲೇ ಇದೆ. ಗಾನಗಂಧರ್ವನ ನೆನಪಿನಲ್ಲೇ ಕನ್ನಡ ಚಿತ್ರರಂಗವೂ ದಿನ ಕಳೆಯುತ್ತಿದೆ.
ರಾಜ್‌ಕುಮಾರ್ ಪುಣ್ಯಸ್ಮರಣೆ ಪ್ರತಿವರ್ಷದಂತೆ ಈ ವರ್ಷವೂ ನೆರವೇರಿದೆ. ದೊಡ್ಮನೆ ಅಭಿಮಾನಿಗಳು ಬಂದು ರಾಜ್ ಸಮಾಧಿಗೆ ಕೈ ಮುಗಿದು ಮತ್ತೆ ಹುಟ್ಟಿ ಬನ್ನಿ ಅಣ್ಣಾವ್ರೆ ಎನ್ನುತ್ತ ಅಭಿಮಾನದ ಕೂಗು ಹಾಕಿದ್ದಾರೆ. ವರನಟನ ಹೆಜ್ಜೆಗುರುತಿನಲ್ಲೇ ಅಪ್ಪುನ ನೆನಪಿಸಿಕೊಂಡಿದ್ದಾರೆ. ರಾಜ್ ಪುಣ್ಯತಿಥಿಗೆ ರಾಜ್ ಕುಟುಂಬ ಹಾಜರಾಗಿದ್ದು, ಸಾಂಪ್ರದಾಯಿಕವಾಗಿ ಪೂಜೆ ಮಾಡಿ, ರಾಜ್ ಪ್ರತಿಬಿಂಬದಲ್ಲೇ ನೋವು ನುಂಗಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ಅಣ್ಣಾವ್ರ ಪುತ್ರಿ ಪೂರ್ಣಿಮಾ ಸೇರಿದಂತೆ ರಾಜ್ ಫ್ಯಾಮಿಲಿ ರಾಜ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿತು.
ಈ ವೇಳೆ ರಾಜ್ ಕುಮಾರ್ ಹಾಕಿಕೊಟ್ಟ ದಾರಿಯನ್ನು ನೆನಪಿಸಿಕೊಂಡು ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ಮರೆಯಲಾಗದ ಮಯೂರ ಇಂದಿಗೂ ನಮ್ಮ ಮನಸ್ಸುಗಳಲ್ಲಿ ಜೀವಂತ. ಅವರನ್ನು ಕನ್ನಡ ಜಗತ್ತು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಅಪ್ಪನೂ ಹೋದ್ರು, ಅಪ್ಪುನೂ ಹೋಗಿಬಿಟ್ಟ. ಈಗ ನಾವೆಲ್ಲರೂ ಒಂದು ರೀತಿಯ ಅನಾಥಪ್ರಜ್ಞೆಯಲ್ಲಿ ಇದ್ದೇವೆ. ಜೀವನ ದೊಡ್ಡದು. ಅವರು ಹಾಕಿಕೊಟ್ಟ ದಾರಿಯಲ್ಲೇ ಸಾಗಬೇಕು ಅಷ್ಟೇ" ಅಂತ ಕೆಲಕಾಲ ಮೌನವಾದರು.
ಇನ್ನು ಅಭಿಮಾನಿಗಳು ಬೆಳಿಗ್ಗೆಯಿಂದಲೇ ಅಣ್ಣಾವ್ರ ಸ್ಮಾರಕದ ಮುಂದೆ ಬಂದು ನಮನ ಸಲ್ಲಿಸಿದ್ರು. ಅಂದಿನ ರಾಜ್‌ಕುಮಾರ್ ಗತಕಾಲದ ವೈಭವವನ್ನು ರಿಕಾಲ್ ಮಾಡಿಕೊಂಡರು.
ಇದನ್ನೂ ಓದಿ: ಅಪ್ಪು ಪುಣ್ಯಸ್ಮರಣೆ: ಪತ್ನಿ, ಪುತ್ರಿ ಸೇರಿ ರಾಜ್ ಕುಟುಂಬಸ್ಥರಿಂದ ಸಮಾಧಿಗೆ ಪೂಜೆ ಸಲ್ಲಿಕೆ