ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಪುಷ್ಪ 2' ಇಂದು ಅದ್ಧೂರಿಯಾಗಿ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಚಿತ್ರ ಮೊದಲ ದಿನವೇ ಪ್ರೇಕ್ಷಕರ ಹೃದಯ ಗೆದ್ದಿದೆ ಎಂಬುದನ್ನು ಎಕ್ಸ್-ರಿವ್ಯೂ ತೋರಿಸಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಹುವಾಗಿ ಆನಂದಿಸುತ್ತಿದ್ದಾರೆ. ಆದ್ರೆ, ಚಿತ್ರಮಂದಿರದಲ್ಲಿ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 'ಪುಷ್ಪ 2' ಪೈರಸಿಗೆ ಬಲಿಯಾಗಿದೆ. ಅನೇಕ ಆನ್ಲೈನ್ ಸೈಟ್ಗಳಲ್ಲಿ ಸಿನಿಮಾ ಲೀಕ್ ಆಗಿದೆ.
ಹೌದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ 'ಪುಷ್ಪ 2' ತಮಿಳ್ ರಾಕರ್ಸ್, ಫಿಲ್ಮಿಜಿಲ್ಲಾ, ಮೂವೀಸ್ ಸೇರಿದಂತೆ ಅನೇಕ ಪೈರಸಿ ಸೈಟ್ಗಳಲ್ಲಿ ಲೀಕ್ ಆಗಿದೆ, ಅದು ಕೂಡಾ ಹೆಚ್ಡಿ ಫಾರ್ಮ್ಯಾಟ್ನಲ್ಲಿ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಚಲನಚಿತ್ರಗಳು ಸೋರಿಕೆ ಆಗುವುದು ಸಾಮಾನ್ಯ ವಿಷಯ ಆಗಿದ್ದರೂ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ಬಿಗ್ ಸ್ಕ್ರೀನ್ನಲ್ಲಿ ಸಿನಿಮಾ ವೀಕ್ಷಿಸಿ ಆನಂದಿಸಲು ಬಯಸುತ್ತಾರೆ. ಹಾಗಾಗಿಯೇ, ಅಡ್ವಾನ್ಸ್ ಬುಕಿಂಗ್ನಲ್ಲಿ ಪುಷ್ಪ 2 ದಾಖಲೆಯ ಗಳಿಕೆ ಮಾಡಿದೆ.
ನಿರೀಕ್ಷೆಯಂತೆ ಇಂದು ಥಿಯೇಟರ್ಗಳಲ್ಲಿ 'ಪುಷ್ಪ 2'ಗೆ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿದೆ. ಪ್ರೀ ರಿಲೀಸ್ ಮತ್ತು ಆರಂಭಿಕ ಶೋಗಳನ್ನು ವೀಕ್ಷಿಸಿರುವ ಅಪಾರ ಸಂಖ್ಯೆಯ ಪ್ರೇಕ್ಷಕರು, ಸುಕುಮಾರ್ ನಿರ್ದೇಶನದ ಈ ಚಿತ್ರವನ್ನು 'ವರ್ಷದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ' ಎಂದು ಬಣ್ಣಿಸಿದ್ದಾರೆ. ಎಕ್ಸ್ ರಿವ್ಯೂ ಗಮನಿಸುವುದಾದರೆ, ಚಿತ್ರಕ್ಕೆ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಡೈಲಾಗ್ಗಳಿಂದ ಹಿಡಿದು ಅಲ್ಲು ಅರ್ಜುನ್ ಅವರ ಜಾತ್ರಾ ಸೀನ್ ಥಿಯೇಟರ್ನಲ್ಲಿ ಸಾಕಷ್ಟು ಶಿಳ್ಳೆ ಚಪ್ಪಾಳೆಗಳನ್ನು ಸ್ವೀಕರಿಸಿದೆ. ಪ್ರೇಕ್ಷಕರು ಇದನ್ನು ರಾಷ್ಟ್ರ ಪ್ರಶಸ್ತಿಗೆ ಅರ್ಹವಾದ ಪ್ರದರ್ಶನ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಪುಷ್ಪ ಸೀಕ್ವೆಲ್: ವಿಶ್ವದಾದ್ಯಂತ 270 ಕೋಟಿ ಗಳಿಸುವ ಮೊದಲ ನಟರಾಗಲಿದ್ದಾರೆ ಅಲ್ಲು ಅರ್ಜುನ್
ಪುಷ್ಪ 2 ಚಿತ್ರಕ್ಕಾಗಿ ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದರು. ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾದಾಗಲೂ ಬಹಳ ಬೇಸರ ವ್ಯಕ್ತಪಡಿಸಿದ್ದರು. 2021ರಲ್ಲಿ ಬಿಡುಗಡೆ ಆದ ಪುಷ್ಪ ದಿ ರೈಸ್ ಕಥೆ ಎಲ್ಲಿ ಕೊನೆಗೊಂಡಿತ್ತೋ ಅಲ್ಲಿಂದಲೇ ಪುಷ್ಪ ದಿ ರೂಲ್ ಕಥೆ ಪ್ರಾರಂಭವಾಗಿದ್ದು, ಸದ್ಯ ಸಿನಿಮಾ ಸಕ್ಸಸ್ನಲ್ಲಿ ಮುಳುಗಿದೆ.
ಇದನ್ನೂ ಓದಿ: ಹಸೆಮಣೆ ಏರಿದ ನಾಗ ಚೈತನ್ಯ ಶೋಭಿತಾ ಧೂಳಿಪಾಲ: ಸುಂದರ ಫೋಟೋಗಳನ್ನೊಮ್ಮೆ ನೋಡಿ ಬಿಡಿ!
ಪುಷ್ಪ 2 ಚಿತ್ರದ ಜನಪ್ರಿಯತೆ ಮುಗಿಲು ಮುಟ್ಟಿದೆ. ಪ್ರಚಾರ ಕೂಡಾ ಅದ್ಧೂರಿಯಾಗೇ ನಡೆದಿದೆ. ಪ್ರೀ ರಿಲೀಸ್ ಹಿನ್ನೆಲೆ ಬುಧವಾರ ರಾತ್ರಿಯಿಂದಲೇ ಥಿಯೇಟರ್ಗಳಲ್ಲಿ ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪುಷ್ಪ 2ರ ಟಿಕೆಟ್ 1000 ರೂ.ಗೆ ಮಾರಾಟವಾಗಿದೆ. ನಾಳೆ ಮುಂಜಾನೆ ತಿಳಿದುಬರಲಿರುವ ಬಾಕ್ಸ್ ಆಫಿಸ್ ಕಲೆಕ್ಷನ್ ಅಂಕಿ ಅಂಶಗಳ ಮೇಲೆ ಹೆಚ್ಚಿನವರ ಗಮನವಿದೆ.