ಗಂಗಾವತಿ/ಗದಗ: ಪ್ರತಿಭೆ, ಕಲೆಯ ವಿಚಾರಗಳಿಗೆ ಸೀಮೆಗಳಿಲ್ಲ. ಅದು ರಾಜ್ಯ, ದೇಶ, ಭಾಷೆಗಳ ಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸುತ್ತದೆ. ಇದಕ್ಕೆ ಚಂದನವನದ ಪ್ರತಿಭಾವಂತ ನಟ ದಿ. ಪುನೀತ್ ರಾಜ್ಕುಮಾರ್ ಅವರೇ ನಿದರ್ಶನ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪಟ್ಟಣದ ಮುತ್ತು ಸೆಲ್ವನ್ರಾಜ್ ಎಂಬ ಅಪ್ಪು ಅಪ್ಪಟ ಅಭಿಮಾನಿಯೋರ್ವರು ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಸೈಕಲ್ ಮೂಲಕವೇ ಮೂರು ವರ್ಷ ಅಂದರೆ 1,111 ದಿನಗಳಲ್ಲಿ ಏಷ್ಯಾ ಖಂಡದ ನಾನಾ ದೇಶಗಳನ್ನು ಸುತ್ತುವ ಗುರಿ ಇಟ್ಟುಕೊಂಡಿದ್ದಾರೆ.
ಪುನೀತ್ ನಿಧನದ ಬಳಿಕ ಅವರ ಸ್ಮರಣಾರ್ಥ ಕಳೆದ 2021ರ ಡಿಸೆಂಬರ್ 21ರಂದು ಯಾತ್ರೆ ಆರಂಭಿಸಿರುವ ಮುತ್ತು ಸೆಲ್ವನ್ರಾಜ್, ಇದುವರೆಗೆ ದೇಶದ ನಾನಾ ರಾಜ್ಯಗಳನ್ನು ಸುತ್ತಿದ್ದಾರೆ. ಇದೀಗ 19ನೇ ರಾಜ್ಯವಾಗಿ ಕರ್ನಾಟಕ ಪ್ರವೇಶಿಸಿದ್ದಾರೆ. ಕೊಪ್ಪಳ 449ನೇ ಜಿಲ್ಲೆ ಎಂದು ಮುತ್ತು ತಿಳಿಸಿದರು.
ತಮಿಳುನಾಡಿನಿಂದ ಸೈಕಲ್ ಯಾತ್ರೆ ಆರಂಭಿಸಿರುವ ಮುತ್ತು, ಲಡಾಕ್, ಜಮ್ಮು-ಕಾಶ್ಮೀರ, ಗೋವಾ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಒಟ್ಟು 19 ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ಅಷ್ಟೇ ಅಲ್ಲದೇ ಏಷ್ಯಾಖಂಡದ ದೇಶಗಳಾದ ನೇಪಾಳ್, ಬಾಂಗ್ಲಾದೇಶ, ವಿಯೆಟ್ನಾಂ ಸೇರಿದಂತೆ ಹಲವೆಡೆ ಸಂಚರಿಸಿದ್ದಾರೆ. ಒಟ್ಟು 1,111 ದಿನಗಳ (ಸುಮಾರು ಮೂರು ವರ್ಷ ಕಾಲ) ಈ ಯಾತ್ರೆಯನ್ನು ಸೈಕಲ್‌ನಲ್ಲೇ ಪೂರ್ಣಗೊಳಿಸುವ ಗುರಿ ಮುತ್ತು ಅವರದ್ದು.
ಯಾತ್ರೆಯ ಉದ್ದೇಶ: ದಕ್ಷಿಣ ಭಾರತದ ನಾನಾ ರಾಜ್ಯಗಳ ಬಹುತೇಕ ಜನರಿಗೆ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಗೊತ್ತಿರುವ ಕಾರಣ ಯಾತ್ರೆಯ ಸಂದರ್ಭ ಪ್ರತೀ ತಾಲೂಕಿನಲ್ಲಿ ಸಸಿಗಳನ್ನು ನೆಡುವುದು, ಬಳಿಕ ಅಲ್ಲಿನ ಅಪ್ಪು ಅಭಿಮಾನಿಗಳನ್ನು ಭೇಟಿಯಾಗಿ ಮಾಹಿತಿ ಹಂಚಿಕೊಳ್ಳುವ ಉದ್ದೇಶ ಇವರದ್ದಾಗಿದೆ. ಪುನೀತ್ ಬದುಕಿದ್ದ ಸಂದರ್ಭದಲ್ಲಿ ಮುತ್ತು ಸೆಲ್ವನ್ರಾಜ್ ಗೆಳೆಯನ ಪತ್ನಿಯ ಚಿಕಿತ್ಸೆಗೆ ಸಹಾಯ ಮಾಡಿದ್ದರಂತೆ. ಅದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿಯೂ ಈ ಯಾತ್ರೆ ಕೈಗೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ಪ್ರತೀ ವರ್ಷ ಆಚರಿಸುವ ಕಾರ್ಯಕ್ರಮದ ಮಾಹಿತಿ ಪಡೆದು ಪುಸ್ತಕ ಬರೆಯುವ ಇಂಗಿತವೂ ಮುತ್ತು ಅವರಿಗಿದೆ. ಸಂಚರಿಸುವ ಪ್ರತೀ ತಾಲೂಕಿನ ಪೊಲೀಸ್ ಠಾಣೆ, ತಹಶೀಲ್ದಾರ್ಗಳನ್ನು ಭೇಟಿಯಾಗಿ ತಮ್ಮೊಂದಿಗೆ ತಂದಿರುವ ಪುಸ್ತಕದಲ್ಲಿ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ.
8 ಲಕ್ಷ ರೂ. ವೆಚ್ಚ: ಎಂಬಿಎ ಹಣಕಾಸು ನಿರ್ವಹಣೆ ಶಿಕ್ಷಣ ಪಡೆದಿರುವ ಮುತ್ತುರಾಜ್, ವೆಲ್ಕಾರ್ ಸಂಸ್ಥೆಯಲ್ಲಿ ಬೈಯೋ ಮೆಡಿಕಲ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಪುನೀತ್ ನಿಧನದ ಬಳಿಕ ಉದ್ಯೋಗಕ್ಕೆ ರಾಜೀನಾಮೆನೀಡಿ, ಅವರ ಸ್ಮರಣಾರ್ಥ ದೇಶ ಸುತ್ತುವ ಅಭಿಯಾನ ಆರಂಭಿಸಿದ್ದಾರೆ. ಈವರೆಗೆ ಯಾತ್ರೆಯ ಸಂದರ್ಭದಲ್ಲಿ ಊಟ, ತಿಂಡಿ, ಚಹಾ ಸೇವನೆಯಂತಹ ನಾನಾ ಕಾರಣಕ್ಕೆ ಒಟ್ಟು ಎಂಟು ಲಕ್ಷ ರೂ. ಹಣ ವ್ಯಯಿಸಿದ್ದಾರೆ. ಈ ಪೈಕಿ ಆರು ಲಕ್ಷ ರೂ. ಹಣ ಮುತ್ತು ಅವರದ್ದೇ. ಮಿಕ್ಕ ಎರಡು ಲಕ್ಷ ರೂಪಾಯಿಯನ್ನು ಸ್ನೇಹಿತರು, ಅಭಿಮಾನಿಗಳು ನೀಡಿದ್ದಾರೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.
ನಟ ಚೇತನ್ ಟೈಯರ್ ಕೊಡುಗೆ: ಮುತ್ತು ಸೆಲ್ವನ್ರಾಜ್ ಹಮ್ಮಿಕೊಂಡಿರುವ ಸೈಕಲ್ ಯಾತ್ರೆಯಲ್ಲಿ ಈವರೆಗೆ ಎರಡು ಸೈಕಲ್ ಬದಲಿಸಲಾಗಿದೆ. ಇದೀಗ ಮೂರನೇ ಸೈಕಲ್ ಬಳಸುತ್ತಿದ್ದಾರೆ. ಟೈಯರ್ಗಳು ಸವೆಯುವ ಹಿನ್ನೆಲೆಯಲ್ಲಿ ಈವರೆಗೆ 110 ಟೈಯರ್ಗಳನ್ನು ಬದಲಿಸಲಾಗಿದ್ದು, ನಟ ಚೇತನ್ 111ನೇ ಟೈಯರ್ ಕೊಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಬ್ರೈನ್ ಸ್ಟ್ರೋಕ್: ಹೇಗಿದೆ ಆರೋಗ್ಯ? ಹೆಲ್ತ್ ಅಪ್‌ಡೇಟ್ಸ್
ಯಾತ್ರೆಯ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ನಾನು ಚಿರಋಣಿ. 2025ರ ಜನವರಿ 26ರಂದು ದೆಹಲಿಯ ಇಂಡಿಯಾ ಗೇಟ್ನಲ್ಲಿ ಪ್ರಯಾಣ ಮುಕ್ತಾಯ ಮಾಡುವ ಗುರಿ ಇದೆ ಎಂದು ಮುತ್ತು ಸೆಲ್ವನ್ರಾಜ್ ಹೇಳಿದ್ದಾರೆ.