ಸಿನಿಮಾ ನಿರ್ಮಾಣದ ಜೊತೆಗೆ ಗೋವುಗಳ ಸೇವೆಯಲ್ಲಿ ತೊಡಗಿಕೊಂಡಿರುವ ಮಹೇಂದ್ರ ಮುನ್ನೋತ್ ಅವರು ಮಾಗಡಿಯ ಕುಲದೇವರು ಶ್ರೀ ರಂಗನಾಥಸ್ವಾಮಿ ಜಾತ್ರೆಗೆ ಬಂದ ಸಾವಿರಾರು ಗೋವುಗಳಿಗೆ ನೀರಿನ ಪೂರೈಕೆ ಮಾಡಿದ್ದಾರೆ.
ಐದು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ಮಹೇಂದ್ರ ಅವರು ನೀರಿನ ಪೂರೈಕೆ ಮಾಡುತ್ತಿದ್ದು, ಮೂಕ ಪ್ರಾಣಿಗಳ ದಾಹವನ್ನು ತೀರಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಗೋವುಗಳಿಗೆ ನೀರನ್ನು ಸರಬರಾಜು ಮಾಡುವುದರ ಜೊತೆಗೆ ರೈತರೊಂದಿಗೆ ದಿನಪೂರ್ತಿ ಕಳೆದು ಹೊಸ ಭರವಸೆ ಉತ್ಸವ ಮೂಡಿಸಿದ್ದಾರೆ. ಇಂತಹ ಐತಿಹಾಸಿಕ ಉತ್ಸವದಲ್ಲಿ ಕಳೆದ 12 ವರ್ಷಗಳಿಂದ ಮಹೇಂದ್ರ ಮುನ್ನೋತ್ ಪಾಲ್ಗೊಂಡು ಗೋವುಗಳ ಸಂರಕ್ಷಣೆಗಾಗಿ ದೇಣಿಗೆ ನೀಡುತ್ತ ಬಂದಿದ್ದಾರೆ. ಶ್ರೀರಂಗನಾಥಸ್ವಾಮಿ ಜಾತ್ರೆಯು ಪ್ರತಿ ವರ್ಷ ಯುಗಾದಿ ಹಬ್ಬದಂದೇ ಆರಂಭಗೊಳ್ಳುತ್ತದೆ. ಈ ಜಾತ್ರೆಯ ಬಹು ಆಕರ್ಷಣೆ ಎಂದರೆ ಗೋವುಗಳ ಪ್ರದರ್ಶನ.
ಇದೇ ವೇಳೆ ಮಾತನಾಡಿದ ಮುನ್ನೋತ್, ''ಎಂತಹದೇ ಕಷ್ಟಕರ ಪರಿಸ್ಥಿತಿ ಬಂದರೂ ರೈತ ಬಾಂಧವರು ತಮ್ಮ ಗೋವುಗಳನ್ನು ಕಟುಕರಿಗೆ ಮಾರಬೇಡಿ. ನಿಮಗೆ ಬೇಡವಾದ ಗೋವುಗಳಿಗೆ ಆಶ್ರಯ ನೀಡಲು ಅನೇಕ ಗೋಶಾಲೆಗಳು ನಮ್ಮಲ್ಲಿವೆ'' ಎಂದರು.
''ರೈತ ತನಗೆ ಭಗವಂತ ನೀಡಿದ ಅಸಾಧಾರಣ ಬುದ್ದಿಶಕ್ತಿ ಮತ್ತು ಯುಕ್ತಿಯಿಂದ ಯಾವ ತಂತ್ರಜ್ಞಾನದಿಂದಲೂ ಉತ್ಪತ್ತಿಸಲಾಗದ ಚಿನ್ನಕ್ಕಿಂತಲೂ ಮಿಗಿಲಾದ ಅನ್ನವನ್ನು ಜಗತ್ತಿಗೆ ನೀಡುತ್ತಿದ್ದಾನೆ. ಹಾಗೆಯೇ ಆತನಿಗಿರುವ ವಿವೇಕ ಜಾಣ್ಮೆಯಿಂದಲೇ ನಾಳೆ ನಡೆಯಲಿರುವ 2024 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಹಿತಾಸಕ್ತಿಯ ಉದ್ದೇಶದಿಂದ ದೇಶಾಭಿಮಾನಿಗೆ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವಂತಾಗಲಿ. ಮುಂಬರಲಿರುವ ಹೊಸ ಮಳೆ, ದೇಶದ ಹೊಸ ಯುಗಾರಂಭಕ್ಕೆ ಈ ಯುಗಾದಿ ದಿಕ್ಸೂಚಿಯಾಗಲಿ'' ಎಂದು ಮುನ್ನೋತ್ ಹಾರೈಸಿದರು.
ಇದನ್ನೂ ಓದಿ : ಪ್ರಾಣಿ, ಪಕ್ಷಿ, ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ; ಯುವಕರ ಮಾನವೀಯ ಕಾರ್ಯ - Water Supply To Animals