ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರತಿಭೆಯ ಜೊತೆಗೆ ಅವಕಾಶ, ಅದೃಷ್ಟ ಇದ್ದರೇನೇ ದೊಡ್ಡ ಮಟ್ಟದ ಸಾಧನೆ ಮಾಡಬಹುದು. ನವಕಲಾವಿದರ ಕಡೆ ಚಲನಚಿತ್ರ ನಿರ್ಮಾಣ ಸಂಸ್ಥೆಗಳೂ ಗಮನ ಹರಿಸಬೇಕು. ಆಗ ಸಾಕಷ್ಟು ಪ್ರತಿಭಾನ್ವಿತರು ಹೊರಹೊಮ್ಮುತ್ತಾರೆ ಅನ್ನೋದು ಸತ್ಯ. ಈ ಮಾತಿಗೆ ಪೂರಕವಾಗಿ ನಿರ್ಮಾಪಕ ಕೆ.ಮುನೀಂದ್ರ ಹೊಸ ಹೆಜ್ಜೆ ಇಟ್ಟಿದ್ದಾರೆ.
ಸಿನಿಮಾ ನಿರ್ಮಾಣ, ವಿತರಣಾ ಸಂಸ್ಥೆಯ ಕಚೇರಿ ಉದ್ಘಾಟನೆ: ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ಮಾಪಕನಾಗಿ, ನಿರ್ಮಾಣ ಹಂತದ ಬಹುತೇಕ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಕೆ.ಮುನೀಂದ್ರ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಬೆಂಗಳೂರಿನ ಗಾಂಧಿನಗರದಲ್ಲಿ ಹೊಸ ಕಚೇರಿ ತೆರೆದಿದ್ದಾರೆ.
ಮಾಧ್ಯಮಾಂಬಿಕ ಎಂಟರ್‌ಪ್ರೈಸಸ್, ಎಂ.ಪಿ.ಫಿಲ್ಮ್ಸ್: ಇತ್ತೀಚೆಗೆ ಕೆ.ಮುನೀಂದ್ರ ನೇತೃತ್ವದ ನೂತನ ವಿತರಣಾ ಸಂಸ್ಥೆ ಮಾಧ್ಯಮಾಂಬಿಕ ಎಂಟರ್‌ಪ್ರೈಸಸ್ ಹಾಗೂ ನಿರ್ಮಾಣ ಸಂಸ್ಥೆ ಎಂ.ಪಿ.ಫಿಲ್ಮ್ಸ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಗಾಂಧಿನಗರದಲ್ಲಿರುವ ಮೋತಿಮಹಲ್ ಹೋಟೆಲ್ ಹಿಂಭಾಗದಲ್ಲಿ ಕೆ.ಮುನೀಂದ್ರ ನೂತನ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯ ಕಚೇರಿ ಪ್ರಾರಂಭಿಸಿದ್ದಾರೆ.
ಮುನೀಂದ್ರ ಆಪ್ತ ಹಾಗೂ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, ''ಮುನೀಂದ್ರ ಅವರು ಸದಭಿರುಚಿ ಸಿನಿಮಾಗಳ ನಿರ್ಮಾಪಕ. ಅವರೀಗ ಚಲನಚಿತ್ರ ನಿರ್ಮಾಣ ಸಂಸ್ಥೆಯ ಜೊತೆಗೆ ಮಾಧ್ಯಮಾಂಬಿಕ ಎಂಟರ್‌ಪ್ರೈಸಸ್ ಎಂಬ ಹೊಸ ವಿತರಣಾ ಸಂಸ್ಥೆ ಪ್ರಾರಂಭಿಸಿದ್ದಾರೆ. ಇದರ ಮೂಲಕ ಹೊಸದಾಗಿ ಹೆಜ್ಜೆ ಇಡುತ್ತಿರುವ ನಿರ್ಮಾಪಕರು, ಕಲಾವಿದರಿಗೆ ಮತ್ತಷ್ಟು ಅನುಕೂಲವಾಗಲಿ'' ಎಂದು ಹಾರೈಸಿದರು.
ಇದನ್ನೂ ಓದಿ: ಶೃತಿ ಹರಿಹರನ್ 'ಸಾರಾಂಶ' ಚಿತ್ರದ ಟ್ರೇಲರ್ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮುನೀಂದ್ರ ಮಾತನಾಡಿ, ನಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಪ್ರತಿಭಾನ್ವಿತ ನಿರ್ದೇಶಕರು, ಯುವ ನಟರ ಸಿನಿಮಾಗಳನ್ನು ಮಾಡುವ ಉದ್ದೇಶವಿದೆ. ಮೊದಲಿಗೆ ವಿಭಿನ್ನ ಹಾಗೂ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುವುದು. ಇದು ಸಿನಿಮಾ ಕನಸು, ಪ್ರತಿಭೆ ಇರುವ ಹೊಸ ಕಥೆಗಾರರು, ನಿರ್ದೇಶಕರು ಹಾಗು ನಟರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸುದೀಪ್ ಸಿನಿಪಯಣಕ್ಕೆ 28 ವರ್ಷ: ಬಿಗ್ ಬಾಸ್ ಜರ್ನಿಗೆ 'ದಶಕ'ದ ಸಂಭ್ರಮ
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಫೈಟರ್ ನಿರ್ಮಾಪಕ ಸೋಮಣ್ಣ, ಬ್ರಹ್ಮ ನಿರ್ಮಾಪಕ ಬಾಬಣ್ಣ, ಕನಕಪುರ ಆರ್.ಶ್ರೀನಿವಾಸ್, ಆರ್.ಎಸ್.ಗೌಡ, ನಿರ್ದೇಶಕರಾದ ಸಂತು, ಭರ್ಜರಿ ಚೇತನ್, ನಾಗೇಂದ್ರ ಅರಸ್, ಶಶಾಂಕ್ ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು ಉಪಸ್ಥಿತರಿದ್ದರು.