ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ನಿರ್ಮಾಣದ ಮುಂದಿನ ಸಿನಿಮಾ ಲಾಫಿಂಗ್ ಬುದ್ಧ. ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಪೊಲೀಸ್ ಜೀವನದ ಸುತ್ತ ಹೆಣೆಯಲಾದ ಕಥೆ ಇದಾಗಿದ್ದು, ಟ್ರೇಲರ್ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.
ಸರಳ ಕಥೆಯೊಂದನ್ನು ಬಹಳ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಊರಲ್ಲೊಂದು ಪೊಲೀಸ್ ಠಾಣೆ, ಅಲ್ಲಿರುವ ಕಾನ್ಸ್ಟೇಬಲ್ಸ್, ಅವರಿಗೆ ಎದುರಾಗುವ ಸನ್ನಿವೇಶಗಳು. ಅವರ ಸುತ್ತ ನಡೆಯುವ ಘಟನೆಗಳನ್ನು ಈ ಟ್ರೇಲರ್ನಲ್ಲಿ ಚಿಕ್ಕ ಮತ್ತು ಚೊಕ್ಕದಾಗಿ ಪ್ರದರ್ಶಿಸಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ಸ್ ವೃತ್ತಿ ಮತ್ತು ವೈಯಕ್ತಿಕ ಜೀವನ, ಮನರಂಜನೆ ಜೊತೆಗೆ ಒಂದಿಷ್ಟು ಸವಾಲುಗಳ ಸುತ್ತ ಕಥೆ ಹೆಣೆದಂತಿದೆ. ನಿಜಜೀವನದ ದೃಶ್ಯಗಳನ್ನೇ ನೋಡಿದಂತ ಅನುಭವ ಕೊಡುತ್ತಿದೆ ಕಲಾವಿದರ ಅಭಿನಯ.
ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಿರ್ಮಾಣದ ಲಾಫಿಂಗ್ ಬುದ್ಧ ಒಂದು ಕಾಮಿಡಿ ಡ್ರಾಮಾ. ಗೆಳೆಯ ರಿಷಬ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಾಯಕ ನಟನಾಗಿ ಇದು ಅವರ ಚೊಚ್ಚಲ ಚಿತ್ರ. ಈವರೆಗೆ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ, ಪ್ರಮುಖ ಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿದ್ದಾರೆ. ಅದರಂತೆ ಈ ಚಿತ್ರದಲ್ಲೂ ತಮ್ಮ ನಟನಾ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ ಎಂಬ ಸುಳಿವನ್ನು ಈ ಸಿನಿಮಾ ಕೊಟ್ಟಿದೆ.
ಲಾಫಿಂಗ್ ಬುದ್ಧ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಪೊಲೀಸ್ ಕಾನ್ಸ್ಟೇಬಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿಯತ್ತಿನ ಕೆಲಸಗಾರ. ಆದ್ರೆ ತಮ್ಮ ದಢೂತಿ ದೇಹದಿಂದ ಹಲವರ ತಮಾಷೆಗೆ, ಟೀಕೆಗೂ ಒಳಗಾಗುತ್ತಾರೆ. ತೂಕ ಇಳಿಸಿಕೊಳ್ಳಲು ಮುಂದಾಗುವ ಹೊತ್ತಲ್ಲಿ ಆ ಪೊಲೀಸ್ ಠಾಣೆಯಲ್ಲಿ ದುರಂತವೊಂದು ನಡೆಯುತ್ತದೆ. ಪ್ರಕರಣ ಇಡೀ ಪೊಲೀಸ್ ಠಾಣೆ ಮೇಲೆ ಪ್ರಭಾವ ಬೀರುತ್ತದೆ. ಸಮಸ್ಯೆಯಿಂದ ಹೊರಬರಲು ಪ್ರಮೋದ್ ಶೆಟ್ಟಿ ಸೆರಿದಂತೆ ಠಾಣೆಯವರು ಮಾಡುವ ಪ್ರಯತ್ನ, ಅವರಿಗೆ ಎದುರಾಗುವ ಸವಾಲುಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ದೃಶ್ಯಗಳಿಗೆ ಮನರಂಜನೆಯ ಲೇಪ ಕೊಡಲಾಗಿದ್ದು, ಸಿನಿಮಾ ನಿಮ್ಮನ್ನು ನಗೆಗಡಲಲ್ಲಿ ತೇಲಿಸಲಿದೆ ಎಂಬ ಭರವಸೆಯನ್ನು ಈ ಟ್ರೇಲರ್ ಕೊಟ್ಟಿದೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಟ್ರೇಲರ್ ಹಂಚಿಕೊಂಡ ನಿರ್ಮಾಪಕ ರಿಷಬ್ ಶೆಟ್ಟಿ, ''ನಮ್ಮ ಚಿತ್ರದ ಟ್ರೇಲರ್ ನೋಡಿ, ಪ್ರೋತ್ಸಾಹಿಸಿ, ಹರಸಿದ ಎಲ್ಲಾ ಸಿನಿ ರಸಿಕರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಗೆ ನಾವು ಚಿರಋಣಿ. ಇಂತಿ ನಿಮ್ಮ, ಲಾಫಿಂಗ್ ಬುದ್ಧ ಚಿತ್ರತಂಡ'' ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡ ಡಿವೈನ್ ಸ್ಟಾರ್, 'ನಿಮ್ಮನ್ನು ನಗಿಸಲು ಸದಾ ಸಿದ್ಧ, ನಿಮ್ಮ ಪ್ರೀತಿಯ ಲಾಫಿಂಗ್ ಬುದ್ಧ' ಎಂದು ಬರೆದುಕೊಂಡಿದ್ದಾರೆ.
ಭರತ್ ರಾಜ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಕಾನ್ಸ್ಟೇಬಲ್ ಪಾತ್ರವನ್ನು ಮತ್ತು ತೇಜು ಬೆಳವಾಡಿ ಸತ್ಯವತಿ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ದಿಗಂತ್ ಮಂಚಾಲೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭದ್ರಾವತಿ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರುವ ಈ ಸಿನಿಮಾ ಇದೇ ತಿಂಗಳ 30 ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಬೆಳ್ಳಿ ತೆರೆಮೇಲೆ ದೇಶಪ್ರೇಮ ಸಾರಿದ ಕನ್ನಡ ಚಿತ್ರಗಳ ಮೆಲುಕು ನೋಟ - Kannada Patriotic Movies