ಕನ್ನಡ ಚಿತ್ರರಂಗದಲ್ಲಿ ಖಳ ನಟ, ಪೋಷಕ ಪಾತ್ರಗಳಿಂದಲೇ ತನ್ನದೇ ಬೇಡಿಕೆ ಹೊಂದಿರುವ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿರೋ ಲಾಫಿಂಗ್ ಬುದ್ಧ ಚಿತ್ರ ಬಿಡುಗಡೆ ಆಗಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರ ಯಶಸ್ಸಿನ ಬೆನ್ನಲ್ಲೇ ಪ್ರಮೋದ್ ಶೆಟ್ಟಿ ಅವರ ಮತ್ತೊಂದು ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಜೊತೆಗೆ ಶೀಘ್ರದಲ್ಲೇ ಟೀಸರ್ ಕೂಡ ಬಿಡುಗಡೆಯಾಗಲಿದೆ.
ಪ್ರಮೋದ್ ಶೆಟ್ಟಿ ಅವರು ಹುಟ್ಟುಹಬ್ಬಕ್ಕೆ 'ಕರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ' ಚಿತ್ರತಂಡ ಶುಭ ಕೋರುತ್ತಾ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. TEASER COMMING SOON ಅಂತ ಕೂಡ ಅನೌನ್ಸ್ ಮಾಡಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
![ಪ್ರಮೋದ್ ಶೆಟ್ರ 'ಅಧಿಕ ಪ್ರಸಂಗ' ಪೋಸ್ಟರ್ ರಿಲೀಸ್](https://etvbharatimages.akamaized.net/etvbharat/prod-images/01-09-2024/kn-bng-05-parmodu-shetty-hosa-cinema-annouced-7204735_31082024200522_3108f_1725114922_321.jpg)
ವಡ್ಡಾರಾಧಕ, ಶಬರಿಯಂತಹ ಕಿರುಚಿತ್ರಗಳಿಂದ ತಮ್ಮೂರಿನ ಕಥೆಗಳು ಎಲ್ಲಾ ಊರುಗಳಲ್ಲೂ ತಲುಪಬೇಕೆಂಬ ಆಶಯವುಳ್ಳ ಅನೀಶ್ ಎಸ್ ಶರ್ಮಾ ಈ ಸಿನಿಮಾದ ಮುಂದಾಳತ್ವ ವಹಿಸಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ ಸೂರಿ ಮತ್ತು ಸುನೀತ್ ಹಲಗೇರಿ ತಮ್ಮ ಸಂಸ್ಥೆ Gunnybag Studios ಮೂಲಕ ಹೊಸ ಹೊಸ ಪ್ರಯೋಗಗಳನ್ನು ತಮ್ಮ ಚೀಲದಲ್ಲಿ ತುಂಬಿಕೊಂಡು ಅದಕ್ಕೆ ಹಣ ಹೂಡುತ್ತಿದ್ದಾರೆ.
ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರನ್ನು ಹೊರತುಪಡಿಸಿ ರಾಘು ಶಿವಮೊಗ್ಗ, ಕಿರಣ್ ನಾಯ್ಕ್, ಮಂಜುನಾಥ್ ಹೆಗ್ಡೆ, ಚಂದ್ರಕಲಾ, ಕೆ.ಜಿ.ಕೃಷ್ಣಮೂರ್ತಿ ಮತ್ತು ಮುಂತಾದವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಸುಮಂತ್ ಶರ್ಮಾ ಅವರ ಛಾಯಾಗ್ರಹಣ, ಚೇತನ್ ಕುಮಾರ್ ಸಂಗೀತ, ಸಂಜೀವ್ ಜಾಗಿರ್ದರ್ ಅವರ ಸಂಕಲನ ಈ ಚಿತ್ರಕ್ಕೆ ಶಕ್ತಿ ತುಂಬಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇನ್ನೇನು ತಮ್ಮ ಮೊದಲ ಟೀಸರ್ ಬಿಡುಗಡೆ ಮಾಡಲು ಸಿದ್ಧರಾಗುತ್ತಿದೆ.
![ಪ್ರಮೋದ್ ಶೆಟ್ಟಿ](https://etvbharatimages.akamaized.net/etvbharat/prod-images/01-09-2024/kn-bng-05-parmodu-shetty-hosa-cinema-annouced-7204735_31082024200522_3108f_1725114922_1022.jpg)
ಲಾಫಿಂಗ್ ಬುದ್ಧ: ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಶುಕ್ರವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಲಾಫಿಂಗ್ ಬುದ್ಧ ಚಿತ್ರವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಸೆಲೆಬ್ರಿಟಿಗಳು ಸಹ ಮೆಚ್ಚಿಕೊಂಡಿದ್ದಾರೆ. ಡೊಳ್ಳೊಟ್ಟೆ ಪೊಲೀಸ್ ಕಾನ್ಸ್ಟೇಬಲ್ ಸುತ್ತ ನಡೆಯುವ ಕಾಮಿಡಿ ಕಥೆಯನ್ನೊಳಗೊಂಡಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಿದು. ಕಾನ್ಸ್ಟೇಬಲ್ ಗೋವರ್ಧನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡು, ಪ್ರೇಕ್ಷಕರ ಮೊಗದಲ್ಲಿ ನಗು ಮೂಡಿಸಿದ್ದಾರೆ.