ಬಹುತಾರಾಗಣದ 'ಕಲ್ಕಿ 2898 ಎಡಿ' ಗುರುವಾರದಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ತೆರೆಕಂಡ ಮೊದಲ ದಿನ ಭಾರತದಲ್ಲಿ ಎಲ್ಲಾ ಭಾಷೆ ಸೇರಿ ಸರಿ ಸುಮಾರು 118 (Gross collection) ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಜಾಗತಿಕವಾಗಿ 191.5 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಎರಡನೇ ದಿನ ಕೊಂಚ ಕುಸಿತ ಕಂಡಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಎರಡನೇ ದಿನದ ಗಳಿಕೆಯಲ್ಲಿ ಗಮನಾರ್ಹ ಕುಸಿತವಾಗಿದೆ. ಭಾರತದಲ್ಲಿ, ಮೊದಲ ದಿನ 95.3 ಕೋಟಿ (Nett collection) ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ತನ್ನ ಎರಡನೇ ದಿನ ಶೇ.43 ರಷ್ಟು ಕುಸಿದು 54 ಕೋಟಿ ರೂ. ಕಲೆಕ್ಷನ್ ಮಾಡಿದೆ.
ತೆಲುಗು ಆವೃತ್ತಿಯಲ್ಲಿ ಸಿನಿಮಾ ಭಾರಿ ಕುಸಿತ ಕಂಡಿದೆ. ತೆಲುಗು ಭಾಷೆಯ 'ಕಲ್ಕಿ 2898 ಎಡಿ' ಗುರುವಾರ, ತನ್ನ ಮೊದಲ ದಿನ 65.8 ಕೋಟಿ ರೂ. ಗಳಿಸಿದರೆ, ಮರುದಿನ 25.65 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿತು. ಶುಕ್ರವಾರ ತೆಲುಗು ಶೋಗಳು ಶೇ.65.02ರಷ್ಟು ಆಕ್ಯುಪೆನ್ಸಿ ರೇಟ್ ಹೊಂದಿತ್ತು. ಚಿತ್ರದ ಹಿಂದಿ ಆವೃತ್ತಿ ಎರಡೂ ದಿನಗಳಲ್ಲಿ 22.5 ಕೋಟಿ ರೂಪಾಯಿ ಮೂಲಕ ಸ್ಥಿರವಾಗಿದೆ.
ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಲಭ್ಯವಿದೆ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಲಾಭ ಗಳಿಸುತ್ತಿದೆ.
- ತಮಿಳು ಆವೃತ್ತಿಯು ಮೊದಲ ದಿನ 4.5 ಕೋಟಿ ರೂಪಾಯಿ ಗಳಿಸಿದ್ದು, ಎರಡನೇ ದಿನ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
- ಕನ್ನಡದಲ್ಲಿ ಮೊದಲ ದಿನ 30 ಲಕ್ಷ ಸಂಪಾದಿಸಿದರೆ, ಎರಡನೇ ದಿನ 35 ಲಕ್ಷ ರೂ. ಗಳಿಸಿದೆ.
- ಮಲಯಾಳಂನಲ್ಲಿ ಚಿತ್ರ ಮೊದಲ ದಿನ 2.2 ಕೋಟಿ ರೂ. ಮತ್ತು ಎರಡನೇ ದಿನ 2 ಕೋಟಿ ರೂ. ಕಲೆಕ್ಷನ್ ಮಾಡಿದೆ.
- ಒಟ್ಟಾರೆ ಭಾರತದಲ್ಲಿ ಕಲ್ಕಿ 2898 ಎಡಿಯ ಎರಡು ದಿನಗಳ ಒಟ್ಟು ಸಂಗ್ರಹ (Nett collection) 149.3 ಕೋಟಿ ರೂ. ಆಗಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ತನ್ನ ಮೊದಲ ದಿನದ ಕಲೆಕ್ಷನ್ ಮೂಲಕ ಬ್ಲಾಕ್ಬಸ್ಟರ್ ಕೆಜಿಎಫ್ 2ರ ಜಾಗತಿಕ ಗಳಿಕೆಯನ್ನು ಮೀರಿಸಿದೆ. ಇನ್ನೂ ಆರ್ಆರ್ಆರ್ ಮತ್ತು ಬಾಹುಬಲಿ 2ರ ನಂತರ ತನ್ನ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಈ ವಾರಾಂತ್ಯ ಸಿನಿಮಾ 500 ಕೋಟಿ ರೂ.ಗಳನ್ನು ಗಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಪ್ರಿಯಾಮಣಿ, ಸನ್ನಿ ಲಿಯೋನ್ ಅಭಿನಯದ ಕೊಟೇಶನ್ ಗ್ಯಾಂಗ್ ಟ್ರೇಲರ್ ರಿಲೀಸ್ - Quotation Gang Trailer