ಸೌತ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಹರಿ ಹರ ವೀರ ಮಲ್ಲು'. ಚಿತ್ರದ ಅಪ್ಡೇಟ್ಸ್, ಟೀಸರ್ - ಟ್ರೇಲರ್ಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು. ಅಂತಿಮವಾಗಿ, ನಿರ್ಮಾಪಕರಿಂದು ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಮಂಗಳವಾರ, 'ಹರಿ ಹರ ವೀರ ಮಲ್ಲು' ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಕ್ರಿಶ್ ಜಗರ್ಲಮುಡಿ ನಿರ್ದೇಶನವಿರುವ ಈ ಸಿನಿಮಾದ ಟೀಸರ್ ಮೇ 2ರ ಬೆಳಗ್ಗೆ 9 ಗಂಟೆಗೆ ಅನಾವರಣಗೊಳ್ಳಲಿದೆ. ಗುರುವಾರ ಬೆಳಗ್ಗೆ ಟೀಸರ್ ಬಿಡುಗಡೆ ಆಗಲಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಕ್ರಿಶ್ ಜಗರ್ಲಮುಡಿ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಹರಿ ಹರ ವೀರ ಮಲ್ಲು ಚಿತ್ರವನ್ನು ಎ ದಯಾಕರ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಎ ಎಮ್ ರತ್ನಂ ಅವರು ಪ್ರಸ್ತುತಪಡಿಸಲಿದ್ದಾರೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಿಧಿ ಅಗರ್ವಾಲ್, ಅರ್ಜುನ್ ರಾಂಪಾಲ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ ನೋಡಲು 1,500 ಕಿ.ಮೀ ಓಡಿದ ಅಭಿಮಾನಿ - Sonu Sood
ಈ ಹಿಂದೆ ಹಂಚಿಕೊಂಡ ಅಪ್ಡೇಟ್ಸ್ನಲ್ಲಿ, ಪವನ್ ಕಲ್ಯಾಣ್ ಅವರು ಪೈಜಾಮಾ, ಟಾಪ್ ಮತ್ತು ಸ್ಕಾರ್ಫ್ ಅನ್ನು ಒಳಗೊಂಡಿರುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ 'ಹರಿ ಹರ ವೀರ ಮಲ್ಲು' ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಜ್ಞಾನ ಶೇಖರ್ ವಿಎಸ್ ಅವರ ಕ್ಯಾಮರಾ ಕೈ ಚಳಕವಿದೆ.
ಇದನ್ನೂ ಓದಿ: ಪಬ್ಲಿಕ್ ಅಕೌಂಟ್ ಆಯ್ತು ಸೈಫ್ ಮಗನ ಇನ್ಸ್ಟಾಗ್ರಾಮ್: ನಾನು ಸ್ವಂಥದ್ದನ್ನು ರಚಿಸುವೆನೆಂದ ಇಬ್ರಾಹಿಂ - Ibrahim Ali Khan
ಕ್ರಿಶ್ ಜಗರ್ಲಮುಡಿ ಮತ್ತು ಪವನ್ ಕಲ್ಯಾಣ್ ಕಾಂಬಿನೇಶನ್ನ ಈ ಚಿತ್ರ 2020ರಲ್ಲೇ ಸೆಟ್ಟೇರಿದೆ. ಆದ್ರೆ ನಾನಾ ಕಾರಣಗಳಿಂದ ಬಿಡುಗಡೆ ವಿಳಂಬವಾಗುತ್ತಾ ಬಂದಿದೆ. ಹಾಗಾಗಿ ಕೆಲ ಸಮಯದ ಹಿಂದೆ ಸಿನಿಮಾ ಸ್ಥಗಿತಗೊಂಡಿರಬಹುದು ಎಂಬ ವದಂತಿಗಳು ಎದ್ದಿದ್ದವು. ಈ ಬಗ್ಗೆ ಫೆಬ್ರವರಿ ತಿಂಗಳ ನಡುವಲ್ಲಿ ಚಿತ್ರ ನಿರ್ಮಾಪಕರು ಮೌನ ಮುರಿದು, ಸಿನಿಮಾ ಕೆಲಸಗಳು ಮುಂದುವರಿದಿವೆ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಟೀಸರ್ ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಜೊತೆಗೆ, ಟ್ರೇಲರ್ ರಿಲೀಸ್ ಮಾಡುವ ಸಾಧ್ಯತೆಗಳಿವೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.