ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಮುಂದುವರಿದಿದೆ. ಹಲವರು ಒಂದೆರಡು ಸಿನಿಮಾ ಮಾಡಿ ಸುಮ್ಮನಾದರೆ, ಕೆಲವರಿಗೆ ಸಿನಿಮಾ ಎಂಬ ಬಣ್ಣದಲೋಕ ಕೈ ಹಿಡಿಯುತ್ತದೆ. ಪ್ರತಿಭೆ, ಶ್ರಮದ ಜೊತೆ ಅದೃಷ್ಟವೂ ಅಗತ್ಯ. ಸ್ಟಾರ್ಗಿರಿ ಪಟ್ಟ ಸುಮ್ಮನೇ ಬರಲ್ಲ. ಇಲ್ಲಿಗೆ ಆಗಮಿಸುವ ಪ್ರತೀ ಪ್ರತಿಭೆಗಳೂ ಕೂಡ ದೊಡ್ಡ ಕನಸನ್ನು ಹೊತ್ತೇ ಬರುತ್ತಾರೆ. ಇದೀಗ ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ 'ಪಂಚೇಂದ್ರಿಯಂ' ಶೀರ್ಷಿಕೆಯ ಚಿತ್ರದಲ್ಲಿ ಯುವ ಪ್ರತಿಭೆಗಳಾದ ವಿನಯ್ ಸೂರ್ಯ ಹಾಗೂ ವಿದ್ಯಾಶ್ರೀ ಅಭಿನಯಿಸಿದ್ದಾರೆ.
ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಹಿನ್ನೆಲೆ, ಪಂಚೇಂದ್ರಿಯಂ ಚಿತ್ರದ ಹಾಡುಗಳು ಹಾಗೂ ಟೀಸರ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಈ ಸಿನಿಮಾದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದವರು ತಮ್ಮ ಚಿತ್ರದ ಅನುಭವಗಳನ್ನು ಹಂಚಿಕೊಂಡರು.
ಮೊದಲು ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ಮಾತನಾಡಿ, ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶ ಇವು ಮಾನವನ ದೇಹವನ್ನು ರೂಪಿಸುವ ಐದು ಅಂಗಗಳು. ಈ "ಪಂಚೇಂದ್ರಿಯ"ಗಳನ್ನು ದೇವರು ಸದ್ಬಳಿಕೆಗಾಗಿ ನೀಡಿದ್ದಾನೆ. ನಾವು ಅದನ್ನು ದುರ್ಬಳಿಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೇ ಈ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದಲ್ಲಿ ಆರು ಹಾಡುಗಳಿವೆ. ನಾನೇ ಸಂಗೀತ ನೀಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿವೆ. ವಿನಯ್ ಸೂರ್ಯ ಈ ಚಿತ್ರದ ನಾಯಕರಾಗಿ ಹಾಗೂ ವಿದ್ಯಾಶ್ರೀ ಮತ್ತು ರಾಘವಿ ನಾಯಕಿಯರಾಗಿ ನಟಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ: ವಿಶೇಷ ಗೌರವಕ್ಕೆ ಪಾತ್ರರಾದ ದಕ್ಷಿಣ ಭಾರತದ ಮೊದಲ ನಟ - Allu Arjun Wax Statue
ಯುವ ನಟ ವಿನಯ್ ಸೂರ್ಯ ಮಾತನಾಡಿ, ನಾನು ''ಜಕ್ಕಣಾಚಾರಿ ಅವನ ತಮ್ಮ ಶುಕ್ಲಾಚಾರಿ'' ಚಿತ್ರದಲ್ಲಿ ಬಾಲನಟನಾಗಿ ಅಭಿಯಿಸಿದ್ದೆ. ಇದೀಗ ಈ ಚಿತ್ರದ ಮೂಲಕ ನಾಯಕ ನಟನಾಗಿದ್ದೇನೆ ಎಂದು ತಿಳಿಸಿದರು. ಇವರ ಜೊತೆ ಯತಿರಾಜ್, ವಿಕ್ಟರಿ ವಾಸು, ಗಣೇಶ್ ರಾವ್ ಹಾಗೂ ಪವನ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ಪ್ರೇಕ್ಷಕರ ಮನ ಗೆದ್ದ 'ಆಡುಜೀವಿತಂ': ಚಿತ್ರಕ್ಕಾಗಿ 16 ವರ್ಷ ಮುಡಿಪಿಟ್ಟ ಪೃಥ್ವಿರಾಜ್ ಸುಕುಮಾರನ್! - Aadujeevitham
'ಪಂಚೇಂದ್ರಿಯಂ' ಚಿತ್ರವನ್ನು ರಾಜ್ ಪ್ರಿಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್ ಸೋಮಶೇಖರ್ ನಿರ್ಮಾಣ ಮಾಡಿದ್ದಾರೆ. ಅಫ್ಜಲ್ ಅವರು ಎರಡನೇ ನಾಯಕನಾಗಿ ಅಭಿನಯಿಸಿರುವುದಲ್ಲದೇ ಕಾರ್ಯಕಾರಿ ನಿರ್ಮಾಪಕರಾಗಿಯೂ ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೇವರಾಯನದುರ್ಗ, ದಾಬಸ್ ಪೇಟೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಟ್ರೇಲರ್ ಬಿಡುಗಡೆ ಮಾಡಿರುವ 'ಪಂಚೇಂದ್ರಿಯಂ' ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ.