ಲಾಸ್ ಏಂಜಲೀಸ್: ಆಸ್ಕರ್ ಅಂಗಳಕ್ಕೆ ಅರ್ಹತೆ ಗಿಟ್ಟಿಸಿದ್ದ ಭಾರತೀಯ ಸಿನಿಮಾ 'ಲಾಪತಾ ಲೇಡಿಸ್' ಇದೀಗ ಸ್ಪರ್ಧೆಯಿಂದ ಹೊರಗೆ ಉಳಿಯುವ ಮೂಲಕ ಕೋಟ್ಯಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ, 'ಅನುಜಾ' ಸಿನಿಮಾ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದು, ಕೊಂಚ ಭರವಸೆ ಮೂಡಿಸಿದೆ.
ಕಿರಣ್ ರಾವ್ ಅವರ 'ಲಾಪತಾ ಲೇಡಿಸ್' ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್ ಕ್ಯಾಟಗರಿಯ ಮುಂದಿನ ಹಂತದ ಸುತ್ತಿಗೆ ಆಯ್ಕೆಯಾಗಿಲ್ಲ. ಆದರೆ, ಗುನೀತ್ ಮೊಂಗ ಕಪೂರ್ ನಿರ್ಮಾಣದ ಲೈವ್ ಆ್ಯಕ್ಷನ್ ಕಿರು ಚಿತ್ರದಲ್ಲಿ 'ಅನುಜಾ' ಆಯ್ಕೆ ಗೊಂಡಿದೆ. ಮಂಗಳವಾರ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಮತ್ತು ಸೈನ್ಸ್, 97ನೇ ಅಕಾಡೆಮಿ ಪ್ರಶಸ್ತಿಗೆ ಅರ್ಹಗೊಂಡ 10 ವರ್ಗದ ಶಾರ್ಟ್ಲಿಸ್ಟ್ ಪ್ರಕಟಿಸಿತು. ಈ ವೇಳೆ, ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್ ಕ್ಯಾಟಗರಿಯಲ್ಲಿ ಭಾರತದ 'ಲಾಪತಾ ಲೇಡಿಸ್' ಅಧಿಕೃತ ಪ್ರವೇಶ ಪಡೆಯುವಲ್ಲಿ ವಿಫಲವಾಯಿತು. ಇದು ಅಭಿಮಾನಿಗಳು ಮತ್ತು ಚಿತ್ರತಂಡದಲ್ಲೂ ಬೇಸರ ಮೂಡಿಸಿತು.
ಈ ನಡುವೆ ಮೊಂಗಾ ಅವರ 'ಅನುಜಾ' ಸಿನಿಮಾ ಬೆಸ್ಟ್ ಲೈವ್ ಆ್ಯಕ್ಷ್ಯನ್ ಶಾರ್ಟ್ ಫಿಲ್ಮ್ ವರ್ಗದಲ್ಲಿ ಆಯ್ಕೆಯಾಗುವ ಮೂಲಕ ಭಾರತೀಯರಲ್ಲಿ ಭರವಸೆ ಮೂಡಿಸಿದೆ. ಈ ಚಿತ್ರವೂ ಗಾರ್ಮೆಂಟ್ ಉದ್ಯಮಗಳಲ್ಲಿ ಬಾಲ ಕಾರ್ಮಿಕರ ವಿಚಾರದ ಕುರಿತು ಬೆಳಕು ಚೆಲ್ಲುವ ಕಥನ ಹೊಂದಿದ್ದು, ನಾಗೇಶ್ ಭೊನ್ಸಲೆ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.
ಮೊಗಾ ಆಸ್ಕರ್ಗೆ ಇದು ಮೂರನೇ ಬಾರಿ ನಾಮಿನೇಷನ್ ಆಗುತ್ತಿದ್ದಾರೆ. ಈ ಹಿಂದೆ 'ದಿ ಎಲಿಫಾಂಟ್ ವಿಸ್ಪರ್' ಮತ್ತು 'ಪಿರಿಯಡ್: ಎಂಡ್ ಆಫ್ ಸೆಂಟನ್ಸ್' ಚಿತ್ರಗಳ ಮೂಲಕ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತೀಯ ಸಿನಿಮಾಗಳ ಹಿರಿಮೆ ಹೆಚ್ಚಿಸಿದ್ದರು.
'ಅನುಜಾ' ಹೊರತಾಗಿ ಮತ್ತೊಂದು ಭಾರತೀಯ ಸಿನಿಮಾ ಕೂಡ ರೇಸ್ನಲ್ಲಿದೆ ಅದುವೇ ಸಂತೋಷ್. ಬ್ರಿಟಿಷ್ ಭಾರತೀಯ ಸಿನಿಮಾ ನಿರ್ದೇಶಕ ಸಂಧ್ಯಾ ಸುರಿ ಇದನ್ನು ನಿರ್ದೇಶಿಸಿದ್ದಾರೆ. ನಟಿ ಸಹನಾ ಗೋಸ್ವಾಮಿ ನಟನೆಯ ಈ ಚಿತ್ರ ಆಸ್ಕರ್ಗೆ ಅಧಿಕೃತ ಪ್ರವೇಶ ಪಡೆದಿದೆ. ಈ ಚಿತ್ರ ಈ ವರ್ಷದಲ್ಲಿ ನಡೆದ ಕೇನ್ಸ್ ಫಿಲ್ಮ್ ಉತ್ಸವದಲ್ಲೂ ಕೂಡ ಪ್ರದರ್ಶನ ಕಂಡಿತು.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್ ಮತ್ತು ಅತ್ಯುತ್ತಮ ಅನಿಮೇಟೆಡ್ ಶಾರ್ಟ್ ಆಸ್ಕರ್ ವಿಭಾಗಗಳಿಗೆ ಸ್ಪರ್ಧೆಯಲ್ಲಿ 30 ಸಿನಿಮಾಗಳ ಪಟ್ಟಿಯನ್ನು ಘೋಷಿಸಿದೆ. ಅದರಲ್ಲಿ 'ಕ್ಲೋಡಾಗ್' 'ದಿ ಕಂಪಾಟ್ರಿಯಾಟ್' 'ಕ್ರಸ್ಟ್' 'ಡೋವ್‌ಕೋಟ್' 'ಎಡ್ಜ್ ಆಫ್ ಸ್ಪೇಸ್' ಮತ್ತು 'ದಿ ಐಸ್ ಕ್ರೀಮ್ ಮ್ಯಾನ್' ಸ್ಥಾನ ಪಡೆದಿದೆ.
ಇದನ್ನೂ ಓದಿ: 'ಶ್..ಅಂದಿನಿಂದಲೂ ನನಗೆ ಉಪೇಂದ್ರ ಅಂದ್ರೆ ವಿಶೇಷ ಪ್ರೀತಿ': ಶಿವರಾಜ್ಕುಮಾರ್