ಮೈಸೂರು: ಬಾಲಿವುಡ್ನ 'ಮೈದಾನ್' ಚಿತ್ರ ಪ್ರದರ್ಶನಕ್ಕೆ ಮೈಸೂರಿನ 1ನೇ ಜೆಎಂಎಫ್ ನ್ಯಾಯಾಲಯ ತಡೆ ನೀಡಿ ಆದೇಶ ಹೊರಡಿಸಿದೆ ಎಂದು ಮೈಸೂರಿನ ಕಥೆಗಾರ ಅನಿಲ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ 1ನೇ ಜೆಎಂಎಫ್ ನ್ಯಾಯಾಲಯದಲ್ಲಿ ನನ್ನ ಕಥೆಯನ್ನು ನಕಲು ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದೆ. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ಏ.24ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದರು.
ಅಮೀರ್ ಖಾನ್ ಅವರಿಗಾಗಿ ಈ ಕಥೆ ಬರೆದಿದ್ದು, ದೇಶದ ಫುಟ್ಬಾಲ್ ಆಟದ ಇತಿಹಾಸವನ್ನು ತಿಳಿಸುವ ಸ್ಟೋರಿ ಇದಾಗಿದೆ. ಇದನ್ನು 2019ರಲ್ಲಿಯೇ ಮುಂಬೈನಲ್ಲಿ 'ಪಾದಕಂಡುಕ' ಎಂಬ ಸಂಸ್ಕೃತದ ಹೆಸರಿನಲ್ಲಿ ಚಿತ್ರಕಥೆ ನೊಂದಾಯಿಸಿದ್ದೇನೆ. ಅಂದು ಅಮೀರ್ ಖಾನ್ ಅವರಿಗೆ ಕಥೆ ತಿಳಿಸಿ, ಚಿತ್ರ ಮಾಡುವ ಇಂಗಿತ ವ್ಯಕ್ತಪಡಿಸಿದ ಸಹಾಯಕ ನಿರ್ದೇಶಕ ಸುಖದಾಸ್ ಸೂರ್ಯವಂಶಿ ಅವರು ನನ್ನಿಂದ ಮಾಹಿತಿ ಪಡೆದುಕೊಂಡಿದ್ದರು.
ಇದೀಗ ಬಿಡುಗಡೆಯಾಗುತ್ತಿರುವ (ಸಿನಿಮಾ ತೆರೆಕಂಡಿದೆ) ಬಾಲಿವುಡ್ನ ಅಜಯ್ ದೇವ್ಗನ್ ಅವರ 'ಮೈದಾನ್' ಚಿತ್ರದ ಸಂಪೂರ್ಣ ಟೀಸರ್ ನನ್ನ ಚಿತ್ರದ ಪಾದಕಂಡುಕವನ್ನೇ ಹೋಲುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಥೆಯ ಕೃತಿ ಚೌರ್ಯವನ್ನು ಮೈದಾನ್ ಚಿತ್ರದ ನಿರ್ದೇಶಕ, ಕಥೆಗಾರ ಹಾಗೂ ನಿರ್ಮಾಪಕರು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಮೈದಾನ್ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ಹೊರಡಿಸಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ನಾನು ಕಾನೂನು ಹೋರಾಟ ನಡೆಸಲಿದ್ದೇನೆ. ನನ್ನ ಕಥೆಯನ್ನು ನನ್ನ ಅನುಮತಿ ಇಲ್ಲದೇ ಬಳಕೆ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲ, ಅಮೀರ್ ಖಾನ್ ಅವರ ಮೇಲೆ ಕಥೆ ರೂಪಿಸಿದ್ದು, ಇಲ್ಲಿ ಬೇರೆ ನಾಯಕ ನಟನನ್ನು ಬಳಸಿರುವುದು ಸಹ ನನಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ನಾನು ಈ ಹೋರಾಟಕ್ಕೆ ಮುಂದಾಗಿರುವುದಾಗಿ ಹೇಳಿದರು.
ಇದನ್ನೂ ಓದಿ: 'ಮೋದಿ ಅಕ್ಕಿಗೆ ಕಾಂಗ್ರೆಸ್ ಹೆಸರು, ಅವರು ಒಂದೇ ಒಂದು ಕಾಳು ಅಕ್ಕಿ ಕೊಟ್ಟಿಲ್ಲ': ಬಿಜೆಪಿ - BJP Election Campaign
ಅಮಿತ್ ಶರ್ಮಾ ನಿರ್ದೇಶನದ ಮೈದಾನ್ ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಅಜಯ್ ಅಲ್ಲದೇ ಪ್ರಿಯಾಮಣಿ ಮತ್ತು ಗಜ್ರಾಜ್ ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಝೀ ಸ್ಟುಡಿಯೋಸ್, ಬೋನಿ ಕಪೂರ್, ಅರುಣವ ಜಾಯ್ ಸೇನ್‌ಗುಪ್ತಾ ಮತ್ತು ಆಕಾಶ್ ಚಾವ್ಲಾ ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆದ್ರೀಗ ಬಹುನಿರೀಕ್ಷಿತ ಚಿತ್ರ ಕಾನೂನು ಅಡೆತಡೆ ಎದುರಿಸುತ್ತಿದೆ. ಚಿತ್ರ ಪ್ರದರ್ಶನಕ್ಕೆ ಮೈಸೂರಿನ 1ನೇ ಜೆಎಂಎಫ್ ನ್ಯಾಯಾಲಯ ತಡೆ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಆಸ್ಕರ್ 2025 ವೇಳಾಪಟ್ಟಿ ಪ್ರಕಟ: ಪ್ರತಿಷ್ಠಿತ ಕಾರ್ಯಕ್ರಮದ ಸಂಪೂರ್ಣ ಮಾಹಿತಿ - Oscars 2025
ಚಿತ್ರದ ಸಹ-ನಿರ್ಮಾಪಕರಾಗಿರುವ ಬೇ ವ್ಯೂವ್ ಪ್ರಾಜೆಕ್ಟ್ಸ್ ಎಲ್‌ಎಲ್‌ಪಿ ಸಂಸ್ಥೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. ಸಿನಿಮಾ ಬಿಡುಗಡೆ ಆದ ಬಳಿಕ ನಾವು ನ್ಯಾಯಾಲಯದಿಂದ ಆದೇಶ ಸ್ವೀಕರಿಸಿರುವುದರಿಂದ ಇದು "ಕಾನೂನಿನಡಿಯಲ್ಲಿ ಅನುಪಯುಕ್ತವಾಗಿದೆ" (infructuous under law) ಎಂದು ತಿಳಿಸಿದ್ದಾರೆ. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.