ದೇವನಹಳ್ಳಿ(ಬೆಂಗಳೂರು ಗ್ರಾ.): ''ಮಂಡ್ಯ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಬಗ್ಗೆ ವರಿಷ್ಠರು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ನನಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ'' ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಮಂಡ್ಯ ಟಿಕೆಟ್ಗಾಗಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬುಧವಾರ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸುಮಲತಾ ಬಂದಿಳಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, "ಮಂಡ್ಯದ ಟಿಕೆಟ್ ಅಂತಿಮವಾಗಿಲ್ಲ. ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಮಾರ್ಚ್ 22ರವರೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವುದಿಲ್ಲ ಎಂದು ಹೇಳಿದ್ದಾರೆ" ಎಂದರು.
ರಾಜಕೀಯ ಮಾಡಿದರೆ ಮಂಡ್ಯದಿಂದ ಮಾತ್ರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, "ನಾನು ರಾಜಕೀಯ ಮಾಡಿದರೆ ಅದು ಮಂಡ್ಯ ಕ್ಷೇತ್ರದಿಂದ ಮಾತ್ರ. ಬೇರೆಯವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆಯೂ ತಿಳಿಸಿದ್ದರು. ಅಲ್ಲಿಯೂ ನಾನು ಸ್ಪರ್ಧೆಗೆ ನಿರಾಕರಿಸಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಅಗತ್ಯ: ಬಿಜೆಪಿ ಸಂಕಲ್ಪ ಪತ್ರಕ್ಕೆ ಉದ್ಯಮಿಗಳ ಸಲಹೆ
"ವರಿಷ್ಠರ ಬಳಿಯೂ ಇದೇ ಮಾತು ಹೇಳಿ ಬಂದಿದ್ದೇನೆ. ಬಹಳ ಬ್ಯುಸಿಯಾಗಿರುವ ಪ್ರಧಾನ ಮಂತ್ರಿಯವರೇ ಕರೆ ಮಾಡಿ ನನ್ನನ್ನು ಕರೆಸಿಕೊಂಡಿದ್ದಾರೆ. ರಾಷ್ಟ್ರಾಧ್ಯಕ್ಷರಾದ ಜೆ.ಪಿ.ನಡ್ಡಾ ನನ್ನ ಜೊತೆ ಮಾತನಾಡಿದ್ದಾರೆ. ನಿಮ್ಮಂಥವರು ನಮ್ಮ ಪಕ್ಷಕ್ಕೆ ಬೇಕೆಂದು ತಿಳಿಸಿದ್ದಾರೆ. ಅವರಿಂದಲೂ ಸಕಾರಾತ್ಮಕ ಅಭಿಪ್ರಾಯ ಬಂದಿದೆ. ಮುಂದೆ ಏನಾಗುತ್ತೋ ನೋಡೋಣ" ಎಂದು ಹೇಳಿದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೇರಳದ ಚಿನ್ನ ವ್ಯಾಪಾರಿ ಮೇಲೆ ಇ.ಡಿ ದಾಳಿ