ಸಂಭಾಲ್: ಸತತ ಎರಡು ದಿನಗಳ ಹಿಂಸಾಚಾರದ ನಂತರ ಮಂಗಳವಾರ ಸಂಭಾಲ್ನಲ್ಲಿ ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದ್ದು, ಶಾಲೆಗಳು ಪುನರಾರಂಭಗೊಂಡಿವೆ. ಆದರೆ ಇಂಟರ್ ನೆಟ್ ಸೇವೆಗಳು ಈಗಲೂ ಬಂದ್ ಆಗಿವೆ. ನ್ಯಾಯಾಲಯದ ಆದೇಶದ ಮೇರೆಗೆ ಮೊಘಲ್ ಯುಗದ ಮಸೀದಿಯೊಂದರ ಸಮೀಕ್ಷೆಯ ವೇಳೆ ಸಂಭಾಲ್ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಪೊಲೀಸರು ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಮುಖ ಜಂಕ್ಷನ್ ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಕ್ರಿಯಾ ಪಡೆ ತಂಡಗಳನ್ನು ನಿಯೋಜಿಸಲಾಗಿದೆ.
ನವೆಂಬರ್ 30 ರವರೆಗೆ ಸಂಭಾಲ್ಗೆ ಪರವೂರಿನವರು ಮತ್ತು ಜನಪ್ರತಿನಿಧಿಗಳು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ಶಾಹಿ ಜಾಮಾ ಮಸೀದಿಯ ಸುತ್ತಮುತ್ತಲಿನ ಪ್ರದೇಶವು ನಿರ್ಜನವಾಗಿತ್ತು.
ಮಸೀದಿ ಇದ್ದ ಜಾಗದಲ್ಲಿ ಹರಿಹರ ದೇವಾಯವಿತ್ತು ಎಂಬ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಸೀದಿಯ ಪ್ರದೇಶವನ್ನು ಸಮೀಕ್ಷೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ನವೆಂಬರ್ 19 ರಂದು ಅಧಿಕಾರಿಗಳು ಮಸೀದಿಯ ಸಮೀಕ್ಷೆಗೆ ಮುಂದಾದಾಗ ಕೆಲವರು ಕಲ್ಲು ತೂರಾಟ ನಡೆಸಿ, ಹಿಂಸಾಚಾರಕ್ಕೆ ಇಳಿದಿದ್ದರು.
ಭಾನುವಾರ, ಸಮೀಕ್ಷಾ ತಂಡವು ತನ್ನ ಕೆಲಸವನ್ನು ಪುನರಾರಂಭಿಸುತ್ತಿದ್ದಂತೆ ಜನರ ದೊಡ್ಡ ಗುಂಪು ಮಸೀದಿಯ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತು. ನಂತರ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಅಲ್ಲದೆ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಹಿಂಸಾಚಾರದಿಂದಾಗಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿದಂತೆ ಸುಮಾರು 24 ಜನ ಗಾಯಗೊಂಡಿದ್ದಾರೆ.
ಹಿಂಸಾಚಾರದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಅಶಾಂತಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ವಿಷ್ಣೋಯ್ ಸೋಮವಾರ ಒತ್ತಿ ಹೇಳಿದ್ದರು. ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ಡ್ರೋನ್ ದೃಶ್ಯಾವಳಿಗಳು, ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್ಗಳು ಮತ್ತು ಮೊಬೈಲ್ ವೀಡಿಯೊಗಳನ್ನು ವಿಶ್ಲೇಷಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಮತ್ತು ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೈಲ್ ಇಕ್ಬಾಲ್ ಮತ್ತು 2,750 ಅಪರಿಚಿತ ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಿರುವ ಪೊಲೀಸರು ಈವರೆಗೆ 25 ಜನರನ್ನು ಬಂಧಿಸಿದ್ದಾರೆ ಮತ್ತು ಏಳು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ : ಕುಟುಂಬದ 4 ಮತಗಳಲ್ಲಿ MNS ಅಭ್ಯರ್ಥಿಗೆ ಬಿದ್ದಿದ್ದು 2 ಮಾತ್ರ!