ಭಾರತದ ಪ್ರಧಾನ ಮಂತ್ರಿಯಾಗಿ ಸತತ 3ನೇ ಬಾರಿಗೆ ನರೇಂದ್ರ ಮೋದಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದೆದುರು ನಡೆದ ಭವ್ಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಸೇರಿದಂತೆ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಮೋದಿ ಹಾಗು ಹೊಸ ಸರ್ಕಾರಕ್ಕೆ ಭಾರತೀಯ ಚಿತ್ರರಂಗದ ಅನೇಕ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ.
ತೆಲುಗಿನ ಸೂಪರ್ಸ್ಟಾರ್ ಚಿರಂಜೀವಿ ಎಕ್ಸ್ನಲ್ಲಿ ಶುಭ ಕೋರಿ, 'ಐತಿಹಾಸಿಕ ಮೂರನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಮಗೆ ಹೃತ್ಪೂರ್ವಕ ಶುಭಾಶಯಗಳು. ನೀವು ಮತ್ತು ನಿಮ್ಮ ಕ್ಯಾಬಿನೆಟ್ ದೇಶದ ಸಮೃದ್ಧಿಗೆ ಬಲ ತುಂಬಲಿ' ಎಂದಿದ್ದಾರೆ.
ಚಿರಂಜೀವಿ ಪುತ್ರ ನಟ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿ, 'ಮೂರನೇ ಬಾರಿಗೆ ಸರ್ಕಾರ ರಚಿಸುತ್ತಿರುವ ಎನ್ಡಿಎ ಸರ್ಕಾರ ಮತ್ತು ನರೇಂದ್ರ ಮೋದಿ ಅವರಿಗೆ ಶುಭಾಶಯ. ನಿಮ್ಮ ನಾಯಕತ್ವದ ಅಡಿ ಭಾರತ ಮತ್ತಷ್ಟು ಪ್ರಜ್ವಲಿಸಲಿ. ಜೈ ಹಿಂದ್' ಎಂದು ಹೇಳಿದ್ದಾರೆ.
ಮಲಯಾಳಂ ನಟ ಮೋಹನ್ಲಾಲ್ ಪ್ರತಿಕ್ರಿಯಿಸಿ, 'ನಿಮ್ಮ ನಾಯಕತ್ವದಲ್ಲಿ ಭಾರತದ ಭವಿಷ್ಯ ಉಜ್ವಲವಾಗಲಿದೆ. ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಅವರಿಗೂ ಶುಭಾಶಯ' ಎಂದು ತಿಳಿಸಿದ್ದಾರೆ.
ಕಮಲ್ ಹಾಸನ್ ಪ್ರತಿಕ್ರಿಯಿಸಿ, 'ನರೇಂದ್ರ ಮೋದಿ ಅವರಿಗೆ ಶುಭಾಶಯಗಳು. ಚುನಾಯಿತ ಪ್ರತಿನಿಧಿಗಳು ಬಲಿಷ್ಠ, ಪ್ರಕಾಶಮಾನ ಮತ್ತು ಹೆಚ್ಚು ಅಂತರ್ಗತ ಭಾರತಕ್ಕಾಗಿ ಒಟ್ಟಾಗಿ ಕೆಲಸ ಮಾಡಲಿ' ಎಂದು ಹೇಳಿದ್ದಾರೆ.
ಬಾಲಿವುಡ್ ನಟ ವರಣ್ ಧವನ್ ಪ್ರತಿಕ್ರಿಯಿಸಿ, 'ಐತಿಹಾಸಿಕ ಮೂರನೇ ಬಾರಿಗೆ ಪ್ರಧಾನಿಯಾಗಿರುವ ಮೋದಿ ದೇಶವನ್ನು ಹೊಸ ಉತ್ತುಂಗಕ್ಕೇರಿಸಲಿ' ಎಂದು ವಿಶ್ ಮಾಡಿದ್ದಾರೆ.
ನಿರ್ದೇಶಕ ಕರಣ್ ಜೋಹರ್ ಪ್ರತಿಕ್ರಿಯಿಸಿ, 'ನಿಮ್ಮ ದೂರದೃಷ್ಟಿ, ಬದ್ಧತೆಯೊಂದಿಗೆ ಭಾರತ ಮುನ್ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.
ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿ, ಅಭಿವೃದ್ಧಿ, ಶಿಕ್ಷಣ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಪ್ರಧಾನಿ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ್ದಾರೆ. ತಮಿಳು ನಟ ವಿಜಯ್ ಕೂಡ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರೆ
ಪ್ರಮಾಣ ವಚನ ಸಮಾರಂಭದಲ್ಲಿ ಪ್ರಮುಖವಾಗಿ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅನುಪಮ್ ಖೇರ್, ರಜನಿಕಾಂತ್, ಅನಿಲ್ ಕಪೂರ್, ವಿಕ್ರಾಂತ್ ಮೆಸ್ಸಿ, ರಾಜ್ಕುಮಾರ್ ಹಿರಾನಿ ಸೇರಿದಂತೆ ಹಲವರು ಇದ್ದರು.