ಕೊಚ್ಚಿ (ಕೇರಳ): ಕೇರಳ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಪ್ರದರ್ಶಿಸಿದೆ. ಹೆಸರಾಂತ ನಟ, ನಿರ್ದೇಶಕರು ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ. ಆರೋಪ ಪ್ರತ್ಯಾರೋಪಗಳು ಜೋರಾಗೇ ಕೇಳಿಬಂದಿವೆ. ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಎದುರಿಸಿರುವ ನಟ - ರಾಜಕಾರಣಿ ಮುಕೇಶ್ ಚಲನಚಿತ್ರ ನೀತಿ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಬಂಧನ ಬರೆ ಬಿದ್ದಿದೆ.
ಕೊಚ್ಚಿ ಕರಾವಳಿ ಪೊಲೀಸ್ ಕಚೇರಿಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಶಾಸಕ ಮುಕೇಶ್ ಅವರನ್ನು ಬಂಧಿಸಲಾಗಿದ್ದು, ಮಲಯಾಳಂ ಚಿತ್ರರಂಗ ಪ್ರಸ್ತುತ ವಿವಾದದಲ್ಲಿ ಸಿಲುಕಿದೆ. ಈ ಬಂಧನದ ಹೊರತಾಗಿಯೂ, ಕೇರಳ ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನಿನ ಹಿನ್ನೆಲೆ ಮುಕೇಶ್ ಬಿಡುಗಡೆ ಆಗಿದ್ದಾರೆ.
ಸಿಪಿಐ(ಎಂ) ಶಾಸಕ ಮತ್ತು ನಟ ಎಂ ಮುಕೇಶ್ ಅವರನ್ನು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ 9.45ಕ್ಕೆ ಇಲ್ಲಿನ ಕರಾವಳಿ ಪೊಲೀಸ್ ಹೆಡ್‌ಕ್ವಾರ್ಟರ್‌ನಲ್ಲಿರುವ ಎಸ್‌ಐಟಿ ಎದುರು ಮುಕೇಶ್ ಹಾಜರಾಗಿ, ಮೂರೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಮುಕೇಶ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ವಡಕ್ಕಂಚೇರಿ ಪೊಲೀಸರು ಮತ್ತು ಮರಡು ಪೊಲೀಸರು ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಎರ್ನಾಕುಲಂ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಲಯ ಸೆಪ್ಟಂಬರ್ 5ರಂದು ಮುಕೇಶ್ ವಿರುದ್ಧ ನಟಿಯರು ಮಾಡಿದ್ದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಇದನ್ನು ಓದಿ: ಡಿವೋರ್ಸ್ ವದಂತಿ ನಡುವೆ ಪ್ಯಾರಿಸ್ ಫ್ಯಾಶನ್ ವೀಕ್ನಲ್ಲಿ ಮಿಂಚು ಹರಿಸಿದ ನೀಲಿ ಕಣ್ಣಿನ ಚೆಲುವೆ - Aishwarya Rai
ಕೇರಳ ಸಿನಿ ವಲಯದ ಗಣ್ಯರ ವಿರುದ್ಧ ನಟಿಯರು ಗಂಭೀರ ಆರೋಪ ಹೊರೆಸಿದ್ದಾರೆ. ನಟರಾದ ಮುಕೇಶ್, ಜಯಸೂರ್ಯ, ಮಣಿಯನ್ಪಿಳ್ಳ ರಾಜು, ಇಡವೆಲ್ ಬಾಬು, ಚಂದ್ರಶೇಖರನ್, ಪ್ರೊಡಕ್ಷನ್ ಟೀಮ್ನ ನೋಬಲ್ ಮತ್ತು ವಿಚು ವಿರುದ್ಧ ಈಗಾಗಲೇ ಗಂಭೀರ ಆರೋಪಗಳು ಕೇಳಿಬಂದಿವೆ. ನಟರ ವಿರುದ್ಧ ಆರೋಪ ಹೊರೆಸಿರುವ ನಟಿಮಣಿಯರ ಹೇಳಿಕೆಗಳನ್ನು ಈಗಾಗಲೇ ತನಿಖಾ ತಂಡ ದಾಖಲಿಸಿಕೊಂಡಿದೆ.
ಇದನ್ನು ಓದಿ: ಮಲೈಕಾ ಅರೋರಾ ಮಲತಂದೆಯ ಪ್ರಾರ್ಥನಾ ಸಭೆ: ಅರ್ಜುನ್ ಕಪೂರ್, ಕರೀನಾ ಸೇರಿ ಸೆಲೆಬ್ರಿಟಿಗಳು ಭಾಗಿ - Malaika Arora
ಇನ್ನೂ, ನಟ ಸಿದ್ದಿಕ್ ಪ್ರಕರಣ ಗಮನಿಸೋದಾದರೆ, ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನಟಿಯೋರ್ವರು ನೀಡಿರುವ ದೂರಿನ ಆಧಾರದ ಮೇಲೆ ಸಿದ್ದಿಕ್ ವಿರುದ್ಧ ಕೇಸ್ ದಾಖಲಾಗಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈಕೋರ್ಟ್ ಇಂದು ನಿರಾಕರಿಸಿತು.