ಹಾವೇರಿ: ''ನಟ ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸಲಾಗುತ್ತಿದೆ. ನಾನು ದರ್ಶನ್ ಆತ್ಮೀಯ ಸ್ನೇಹಿತರು. ಆದ್ರೆ ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೆ ಯಾರಾದರೂ ಜೈಲಿಗೆ ಹೋಗ್ತಾರಾ?'' ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ದರ್ಶನ್ ಜೈಲು ಅತಿಥ್ಯ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವರು ಹಾವೇರಿಯಲ್ಲಿಂದು ಈ ರೀತಿ ಉತ್ತರಿಸಿದರು.
ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, "ದಿನೇಶ್ ಕುಮಾರ್ ಅವರನ್ನು ಟ್ರಾನ್ಸ್ಫರ್ ಮಾಡಿದ್ವಿ. ರಾಜ್ಯಪಾಲರು ಸಸ್ಪೆಂಡ್ ಮಾಡಿದ್ಧಾರೆಂದು ಮಾಧ್ಯಮ ಹೇಳುತ್ತಿದೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಅದಕ್ಕೂ ಸಿಎಂ ಸಿದ್ದರಾಮಯ್ಯ ಅವರಿಗೂ ಏನು ಲಿಂಕ್ ಎಂದು ಪ್ರಶ್ನಿಸಿದ ಜಮೀರ್, ಇದಕ್ಕೂ ಮುಖ್ಯಮಂತ್ರಿಗೂ ಲಿಂಕ್ ಇಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ತೆಗೆದುಕೊಂಡು ಹೇಳುತ್ತೇನೆ" ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹಿಡಿದುಕೊಟ್ಟರು. ನಮ್ಮವರೇ ನಮ್ಮನ್ನು ಹಿಡಿದು ಕೊಡ್ತಾರೆ ಎಂಬರ್ಥದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, "ಮನುಷ್ಯನಿಗೆ ಶತ್ರುಗಳಿರುವುದು ಸಹಜ. ಎಲ್ಲರಿಗೂ ಶತ್ರುಗಳಿರುತ್ತಾರೆ. ನಮ್ಮ ಜೊತೆಯೇ ಇರುತ್ತಾರೆ. ಆದ್ರೆ ಯಾರು ಶತ್ರು ಎಂಬುದು ಹೇಗೆ ಗೊತ್ತಾಗುತ್ತದೆ? ಯಾರು ನಿಜವಾದ ಸ್ನೇಹಿತರೆಂಬುದು ಹೇಗೆ ಗೊತ್ತಾಗುತ್ತದೆ? ಆ ಲೆಕ್ಕದಲ್ಲಿ ಸಿದ್ದರಾಮಯ್ಯನವರು ಮಾತನಾಡಿದ್ದಾರೆ" ಎಂದು ಸಮರ್ಥಿಸಿಕೊಂಡರು. ಇದೇ ವೇಳೆ, "ಶತ್ರುಗಳು ನಮ್ಮ ಜೊತೆಯೇ ಇರುತ್ತಾರೆ. ಆದ್ರೆ ಗೊತ್ತಾಗುವುದಿಲ್ಲ" ಎನ್ನುವ ಮೂಲಕ ಸ್ವಪಕ್ಷೀಯ ವಿರೋಧಿಗಳಿಗೂ ಜಮೀರ್ ಟಾಂಗ್ ಕೊಟ್ಟರು.
ಇನ್ನು, "ವಕ್ಪ್ ಆಸ್ತಿ ವಿಚಾರದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಹೀಗಾಗಿ ಹಾವೇರಿಯಲ್ಲಿ ವಕ್ಪ್ ಅದಾಲತ್ ಹಮ್ಮಿಕೊಂಡಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಕ್ರಿಶ್ಚಿಯನ್ ಪದ್ಧತಿಯಲ್ಲಿ ತರುಣ್ ಸುಧೀರ್-ಸೋನಾಲ್ ಮೊಂತೆರೋ ಮದುವೆ: ವಿಡಿಯೋ - Tharun Sonal Wedding
ಈ ಹಿಂದೆ ಹುಬ್ಬಳ್ಳಿಯಲ್ಲೂ ಸಚಿವ ಜಮೀರ್ ಅಹ್ಮದ್ ಅವರು ದರ್ಶನ್ ವಿಚಾರವಾಗಿ ಹರಿದಾಡುತ್ತಿರುವ ಅಂತೆಕಂತೆಗಳ ಬಗ್ಗೆ ಪ್ರತಿಕ್ರಿಯಿಸಿದ್ದರು. "ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವುದರ ಹಿಂದೆ ನನ್ನ ಯಾವುದೇ ಪಾತ್ರವಿಲ್ಲ" ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಬಳ್ಳಾರಿ: ದರ್ಶನ್ ಮನವಿ ಮೇರೆಗೆ ಜೈಲಿಗೆ ಬಂದ ಸರ್ಜಿಕಲ್ ಚೇರ್! - SURGICAL CHAIR TO DARSHAN
"ನಾವಿಬ್ಬರು ಸ್ನೇಹಿತರು ನಿಜ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಜೈಲಿನಲ್ಲಿರುವ ಅವರಿಗೆ ಹೇಗೆ ಸಹಾಯ ಮಾಡಲು ಸಾಧ್ಯ?. ಬೆಂಗಳೂರು ಜೈಲಿನಲ್ಲಿ ವಿಶೇಷ ಆತಿಥ್ಯದ ಬಗ್ಗೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನನಗೂ ಈ ಕೇಸ್ಗೂ ಯಾವುದೇ ಸಂಬಂಧ ಇಲ್ಲ" ಎಂದಿದ್ದರು.