ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ನಂತಹ ಸಮಸ್ಯೆ ಏನಾದರೂ ಆಗಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವೆ, ಆ ರೀತಿ ಏನಾದರೂ ಸಂಭವಿಸಿದ್ದರೆ ಕ್ರಮ ತೆಗೆದುಕೊಳ್ತೇವೆ. ಮಹಿಳೆಯರ ಅನುಕೂಲಕ್ಕಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಕೆಲ ದಿನಗಳ ಹಿಂದೆ ಬಹಿರಂಗಗೊಂಡಿದೆ. ಚಿತ್ರರಂಗದಲ್ಲಿರುವ ಕೆಲ ಆಘಾತಕಾರಿ ಅಂಶಗಳನ್ನು ಈ ವರದಿ ಒಳಗೊಂಡಿತ್ತು. ಕೇರಳ ಸರ್ಕಾರ ಬಹಿರಂಗಪಡಿಸಿದ ವರದಿ ಮಲೆಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಆರೋಪ ಪತ್ಯಾರೋಪಗಳು ಜೋರಾಗೇ ಕೇಳಿ ಬಂದಿದೆ. ಕೆಲ ನಟ ನಿರ್ದೇಶಕರ ವಿರುದ್ಧ ಪ್ರಕರಣಗಳೂ ದಾಖಲಾಗಿವೆ. ವರದಿ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಇತರ ಚಿತ್ರರಂಗದಿಂದಲೂ ಇದೇ ರೀತಿಯ ಸಮಿತಿ ರಚನೆಯಾಗಬೇಕು ಎಂಬ ಕೂಗು ಕೇಳಿ ಬಂದಿದೆ.
ಅದರಂತೆ ಕನ್ನಡ ಚಿತ್ರರಂಗದ ನಟಿಮಣಿಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳದಂತಹ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಮಿಟಿ ರಚಿಸಬೇಕು ಎಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಈ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಕಾಸ್ಟಿಂಗ್ ಕೌಚ್'ನಂತಹ ಗಂಭೀರ ಸಮಸ್ಯೆ ಇದ್ರೆ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಇನ್ನೂ ಅಂಗನವಾಡಿ ಶಿಕ್ಷಕಿಯರಿಗೆ ವೇತನ ಬಾಕಿ ಬಗ್ಗೆ ಮಾತನಾಡಿ, ಎಲ್ಲ ವಿಚಾರಗಳು ಅಂಗನವಾಡಿ ಶಿಕ್ಷಕಿಯರಿಗೆ ಗೊತ್ತಿದೆ. ರಾಜ್ಯ ಸರ್ಕಾರದಿಂದ 7 ಸಾವಿರ, ಕೇಂದ್ರದಿಂದ 4 ಸಾವಿರ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವರ ಜೊತೆ ಈ ಬಗ್ಗೆ ಮಾತಾಡಿದ್ದೇನೆ. ಈ ಹಿಂದೆಯೂ ಈ ರೀತಿ ಆಗಿದೆ. ಇದೆಲ್ಲ ಗೊತ್ತಿದ್ದರೂ ಏಕೆ ಅಂಗನವಾಡಿ ಶಿಕ್ಷಕಿಯರು ಈ ರೀತಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಗೌರಿ ಗಣೇಶ ಹಬ್ಬದೊಳಗೆ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಕನ್ನಡ ಚಿತ್ರರಂಗದಲ್ಲಿ ನಟಿಯರ ಸುರಕ್ಷತೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ಸೇಫ್ಟಿ ಅನ್ನೋದು ಎಲ್ಲಾ ಕಡೆಗಳಲ್ಲೂ ಇರುತ್ತದೆ. ನಾವು ಹೇಗೆ ಬೌಂಡರಿ ಹಾಕಿಕೊಂಡಿರುತ್ತೇವೆ ಎಂಬುದರ ಮೇಲೆ ಡಿಪೆಂಡ್ ಎಂದು ತಿಳಿಸಿದ್ದರು.