'ಕೋಟಿ'. ಇದು ಸ್ಯಾಂಡಲ್ವುಡ್ನಲ್ಲಿ ಹಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ನಟ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೂಡಾ ಹೌದು. ಇತ್ತೀಚೆಗೆ ಅನಾವರಣಗೊಂಡ ಚಿತ್ರದ ಮನ ಮನ ಹಾಡಿನ ಲಿರಿಕಲ್ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
ಫ್ಯಾಮಿಲಿ ಎಂಟರ್ಟೈನ್ಮೆಂಟ್, ಥ್ರಿಲ್ಲರ್ ಡ್ರಾಮಾ ಜಾನರ್ನ ಈ ಸಿನಿಮಾದಲ್ಲಿ ಧನಂಜಯ್ 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಇರುವ ಪಾತ್ರ ಅವರದ್ದು. ಥ್ರಿಲ್ಲರ್‌ನಲ್ಲಿ ಒಂದು ಪುಟ್ಟ ಲವ್ ಸ್ಟೋರಿ ಕೂಡ ಇದೆ.

ಮನ ಮನ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಬರುವ ವಿಡಿಯೋ ತುಣುಕು ಇನ್ಸ್ಟಾಗ್ರಾಮ್ ರೀಲ್, ವಾಟ್ಸ್‌ಆ್ಯಪ್ ಸ್ಟೋರಿಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಇಬ್ಬರ ನಡುವೆ ಪ್ರೀತಿ ಅರಳಿ ನಿಂತಾಗ, ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತದೆ. 'ನೀವು' ಅಂತ ಕರೆಯುತ್ತಿದ್ದವರು 'ನೀನು' ಅಂತ ಕರೆಯುವ ಸಮಯವದು. ಕೋಟಿಯ ಲೈಫಲ್ಲಿ ಬಂದ ಆ ಸಮಯ ಈ ವಿಡಿಯೋದಲ್ಲಿದೆ. ಎಲ್ಲರ ಲೈಫಲ್ಲೂ ಅಗಿರಬಹುದಾದ ಒಂದು ಸಣ್ಣ ಕ್ಯೂಟ್ ಘಟನೆ. ಇದೇ ಕಾರಣಕ್ಕೆ ಈ ಹಾಡು ಎಲ್ಲರಿಗೂ ಕನೆಕ್ಟ್ ಆಗುತ್ತಿದೆ.
'ಕೋಟಿ'ಯ ಬರಹಗಾರ ಮತ್ತು ನಿರ್ದೇಶಕರಾದ ಪರಮ್ ಮಾತನಾಡಿ, "ಹುಡುಗಿಯೊಬ್ಬಳು ತನ್ನನ್ನು ನೀವು ಎಂದು ಕರೆಯಬೇಡ ಅಂತಾ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚದ ದೃಶ್ಯದಲ್ಲಿ ಧನಂಜಯ್ ಅಭಿನಯಿಸಿರುವ ರೀತಿ ನಿಮಗಿಷ್ಟವಾಗಬಹುದು" ಎಂದು ತಿಳಿಸಿದ್ದಾರೆ.
ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ಸ್ ಈಗಾಗಲೇ ಓಪನ್ ಆಗಿದೆ. ಸಂಜೆ ಸಾರ್ವಜನಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳಿವೆ. ನಾಳೆ ಮೈಸೂರಿನಲ್ಲೂ ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದ್ದು, ಧನಂಜಯ್ ಮತ್ತು ಚಿತ್ರತಂಡ ಮೈಸೂರಿನ ಸಿನಿಪ್ರೇಮಿಗಳ ಜತೆ ಕೋಟಿ ಚಿತ್ರ ವೀಕ್ಷಿಸಲಿದ್ದಾರೆ. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೋಟಿ' ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೆರಿಕ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಸಿನಿಮಾ ತೆರೆಕಾಣಲಿದೆ.
ಸಾಕಷ್ಟು ಸದ್ದು ಮಾಡುತ್ತಿರುವ ಅಪ್ಪಟ ಕನ್ನಡ ಮಣ್ಣಿನ ಕಥೆಯಾದ 'ಕೋಟಿ', ಈ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೇ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ. ಚಿತ್ರದ ತಾರಾಗಣದಲ್ಲಿ ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಇದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ಪವಿತ್ರಾ ಗೌಡ ಯಾರು, ಹಿನ್ನೆಲೆ ಏನು? - Who is Pavitra gowda
ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆ ಗಳಿಸಿದ್ದ ಪ್ರತೀಕ್ ಶೆಟ್ಟಿ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಸಿನಿಮಾದ ಕ್ಯಾಮರಾಮ್ಯಾನ್.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case
ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಬರೆದು ನಿರ್ದೇಶಿಸಿದ್ದಾರೆ. ಜೂನ್ 14ರ ಶುಕ್ರವಾರ 'ಕೋಟಿ' ಚಿತ್ರಮಂದಿರ ಪ್ರವೇಶಿಸಲಿದೆ.