ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಪ್ರಸ್ತುತ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. 'ಬಡವರಾಸ್ಕಲ್' ಸಿನಿಮಾ ಬಳಿ ಡಾಲಿ ಧನಂಜಯ್ ಮತ್ತೆ ಬಡ ಹುಡುಗನ ಪಾತ್ರ ನಿರ್ವಹಿಸಿರೋ ಚಿತ್ರವೇ 'ಕೋಟಿ'. ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಈ ಸಿನಿಮಾದ 'ಮಾತು ಸೋತು' ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗಿದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿವೆ.
ಇನ್ಸ್ಟಾಗ್ರಾಮ್ನಲ್ಲಿ ಕಳೆದ ಒಂದು ವಾರದಿಂದ ಟ್ರೆಂಡಿಂಗ್ನಲ್ಲಿರುವ ಈ ಹಾಡನ್ನು ಯೋಗರಾಜ್ ಭಟ್ ಬರೆದು, ವಾಸುಕಿ ವೈಭವ್ ಸಂಯೋಜಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್ನಲ್ಲಿ 14 ಲಕ್ಷದಷ್ಟು ವೀಕ್ಷಣೆ ಪಡೆದುಕೊಂಡಿದೆ. ಯೂಟ್ಯೂಬ್ ಶಾರ್ಟ್ಸ್ನಲ್ಲೂ ಹಾಡು ಟ್ರೆಂಡ್ ಆಗುತ್ತಿದೆ.
ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ ಮಾತನಾಡಿ, ಮಾತು ಸೋತು ಟ್ರೆಂಡ್ ಆಗುತ್ತಿರೋದು ಖುಷಿ ನೀಡಿದೆ. ಇದು ಇನ್ನೂ ಹೆಚ್ಚಾಗುವ, ಜನಪ್ರಿಯವಾಗೋ ಭರವಸೆ ಇದೆ. ಇಷ್ಟಪಟ್ಟು ಮಾಡಿದ ಹಾಡುಗಳು ಹೀಗೆ ಜನರನ್ನು ತಲುಪಿದಾಗ ಆಗೋ ಖುಷಿ ಬಹಳ ವಿಶೇಷವಾದದ್ದು ಎಂದು ತಮ್ಮ ಸಂತಸ ಹಂಚಿಕೊಂಡರು.
'ಕೋಟಿ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಪರಮ್ ಮಾತನಾಡಿ, ನನ್ನ ಚೊಚ್ಚಲ ಚಿತ್ರದ ಮೊದಲ ಗೀತೆ ಈ ಮಟ್ಟಿಗೆ ಸದ್ದು ಮಾಡುತ್ತಿರುವುದನ್ನು ನೋಡಿ ಖುಷಿ ಆಗಿದೆ. ಪ್ರತಿದಿನ ಸಾವಿರಾರು ರೀಲ್ಸ್‌ಗಳು ಅಪ್ಲೋಡ್ ಆಗುತ್ತಿದ್ದು, ಟ್ರೆಂಡಿಂಗ್ ಹೀಗೆ ಮುಂದುವರಿಯುವ ಭರವಸೆ ಇದೆ ಎಂದರು. ಈ ಹಾಡಿನ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್, ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
'ಕೋಟಿ' ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: 'ವಿಜಯ್ ದೇವರಕೊಂಡ ನನ್ನ ಮೆಚ್ಚಿನ ನಟ': ನಾಚಿ ನೀರಾದ ರಶ್ಮಿಕಾ ಮಂದಣ್ಣ- ವಿಡಿಯೋ ನೋಡಿ - Rashmika Vijay
ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆ ಗಳಿಸಿದ್ದ ಪ್ರತೀಕ್ ಶೆಟ್ಟಿ 'ಕೋಟಿ'ಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಕ್ಯಾಮರಾಮ್ಯಾನ್.
ಇದನ್ನೂ ಓದಿ: ದೀಕ್ಷಿತ್ ಶೆಟ್ಟಿ ನಟನೆಯ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಅನಿಮೇಷನ್ ಟೀಸರ್ಗೆ ಮೆಚ್ಚುಗೆ - Bank Of Bhagyalakshmi
ಬಹುನಿರೀಕ್ಷಿತ ಚಿತ್ರವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು, ನಿರ್ದೇಶಿಸಿದ್ದಾರೆ. ಬರುವ ತಿಂಗಳು ಜೂನ್ 14ರಂದು 'ಕೋಟಿ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.