ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳು ಮೂಡಿಬರುತ್ತಿವೆ. ಒಂದು ಸರಳ ಪ್ರೇಮ ಕಥೆ, ಶಾಖಾಹಾರಿ ಹಾಗೂ ರವಿಕೆ ಪ್ರಸಂಗ ಚಿತ್ರಗಳು ಕಳೆದ ವಾರ ಬಿಡುಗಡೆ ಆಗಿ ವಿಮರ್ಶಕರಿಂದ ಒಳ್ಳೆ ವಿಮರ್ಶೆಗಳನ್ನು ಪಡೆದುಕೊಂಡಿವೆ. ಸಿನಿಮಾ ವೀಕ್ಷಿಸಿದ ಸಿನಿಪ್ರಿಯರು ಕೂಡ ಈ ಚಿತ್ರಗಳ ವಿಭಿನ್ನ ಕಥೆಗೆ ಮನ ಸೋತಿದ್ದಾರೆ. ಅದಾಗ್ಯೂ, ಗೀತಾ ಅವರ 'ರವಿಕೆ ಪ್ರಸಂಗ' ಹಾಗೂ ರಂಗಾಯಣ ರಘು ಅಭಿನಯದ 'ಶಾಖಾಹಾರಿ' ಚಿತ್ರಗಳಿಗೆ ಪ್ರೇಕ್ಷಕರ ಅಭಾವ ಎದ್ದು ಕಾಣುತ್ತಿದೆ.
ಸಿನಿಮಾ ಚೆನ್ನಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದರೂ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಮಾತ್ರ ದೊಡ್ಡ ಮಟ್ಟದಲ್ಲಿಲ್ಲ. ಕಲೆಕ್ಷನ್ ಏರುತ್ತಿಲ್ಲ. ಚಿತ್ರವನ್ನು ಜನ ಮೆಚ್ಚಿರುವ ಸಾರ್ಥಕ ಭಾವ ಚಿತ್ರತಂಡಕ್ಕೆ ಇದೆಯಾದರೂ, ಕಲೆಕ್ಷನ್ ವಿಷಯದಲ್ಲಿ ಸಮಾಧಾನವಿಲ್ಲ. ಹೆಚ್ಚು ಜನರನ್ನು ತಲುಪುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಮತ್ತು ಗೊಂದಲ ಚಿತ್ರತಂಡದವರನ್ನು ಕಾಡುತ್ತಿದೆ. ಒಂದು ವೇಳೆ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಇಳಿದರೆ ಮುಂದಿನ ವಾರ ಚಿತ್ರಮಂದಿರಗಳು ಮತ್ತು ಪ್ರದರ್ಶನಗಳ ಸಂಖ್ಯೆ ಮೈನಸ್ ಆಗುವ ಸಾಧ್ಯತೆ ಇದೆ ಎಂಬ ಭಯವೂ ಕಾಡುತ್ತಿದೆ. ಅದೇ ಗೊಂದಲ ಮತ್ತು ಭಯದಿಂದ ಗೀತಾ ಭಾರತಿ ಭಟ್ ಅಭಿನಯದ ಸಂತೋಷ್ ಕೊಡೆಂಕೇರಿ ನಿರ್ದೇಶನದ 'ರವಿಕೆ ಪ್ರಸಂಗ' ಹಾಗೂ' ಶಾಖಾಹಾರಿ' ಚಿತ್ರತಂಡ ಮಾಧ್ಯಮದ ಮುಂದೆ ಬಂದು ತಮ್ಮ ಸಿನಿಮಾಗಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದೆ.
ರವಿಕೆ ಪ್ರಸಂಗ ಚಿತ್ರ ಜನಸಾಮಾನ್ಯರ ಜೀವನದಲ್ಲಿ ನಡೆಯುವ ಅದ್ಭುತ ಕಥೆ. ಹೆಣ್ಣುಮಕ್ಕಳಿಗೆ ಸರಿಯಾಗಿ ರವಿಕೆ ಒಲಿದು ಕೊಡದೇ ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬ ಕಥೆಯನ್ನು ಒಳಗೊಂಡಿರುವ ರವಿಕೆ ಪ್ರಸಂಗ ಚಿತ್ರ ಕಂಟೆಂಟ್ನಿಂದಾಗಿ ಗಮನ ಸೆಳೆದಿದೆ. ಇಡೀ ಫ್ಯಾಮಿಲಿ ಸಮೇತ ರವಿಕೆ ಪ್ರಸಂಗ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದಾಗಿದೆ. ಆದರೆ ನಿರ್ದೇಶಕ, ನಟಿ ಹೇಳುವ ಹಾಗೆ, ಅವರ ಸಿನಿಮಾಗೆ ಪ್ರೇಕ್ಷಕರ ಸಂಖ್ಯೆ ಇಳಿಕೆಯಾಗಿದೆ. ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಮಾಡಿದರೂ ಕೂಡ ಸಿನಿಪ್ರಿಯರು ಬರುತ್ತಿಲ್ಲವಂತೆ.
ಕನ್ನಡ ಚಿತ್ರರಂಗದಲ್ಲಿ ದುಡ್ಡು ಕೊಟ್ಟು ಪ್ರೇಕ್ಷಕರನ್ನು ಕರೆತರುವ 'ಕ್ರೌಡ್ ಪುಲ್ಲಿಂಗ್' ಪ್ರಕ್ರಿಯೆ ಹೆಚ್ಚಾಗುತ್ತಿದೆಯೆಂದು ಕೂಡ ಆರೋಪಿಸಿದ್ದಾರೆ. ಸಾಮಾನ್ಯವಾಗಿ ಪ್ರತಿಭಟನೆಗಳು ಹಾಗೂ ರಾಜಕೀಯ ಕಾರ್ಯಕ್ರಮಗಳಿಗೆ ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಹೋಗುವುದನ್ನ ನೋಡಿದ್ದೇವೆ. ಈ ಸಂಸ್ಕೃತಿಯೀಗ ಸಿನಿಮಾ ರಂಗದಲ್ಲಿ ಹುಟ್ಟಿಕೊಂಡಿರೋದು ಆತಂಕ ಮೂಡಿಸಿದೆ ಅಂತಾರೆ ನಿರ್ದೇಶಕ ಸಂತೋಷ್ ಕೊಡೆಂಕೇರಿ.
ಇನ್ನೂ ಶಾಖಾಹಾರಿ ಚಿತ್ರ ಕೂಡ ಪ್ರೆಶ್ ಕಥೆಯೊಂದಿಗೆ ವಿಭಿನ್ನವಾಗಿ ಮೂಡಿ ಬಂದಿದೆ. ಈ ಸಿನಿಮಾಗೆ ದೊಡ್ಡ ಸ್ಟಾರ್ಗಳಿಂದ ಪ್ರಚಾರ ಮಾಡಲಾಗಿದೆ. ಆದರೆ, ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲವೆಂಬ ನೋವು ಚಿತ್ರತಂಡದ್ದು. ಈ ಬಗ್ಗೆ ಮಾತನಾಡಿದ ಹಿರಿಯ ನಟ ರಂಗಾಯಣ ರಘು, ಮುಂಗಾರು ಮಳೆ ಎರಡು ವಾರಗಳ ನಂತರ ಪಿಕಪ್ ಆಯಿತು. ರಂಗಿತರಂಗ. 6-5=2 ಚಿತ್ರಗಳಿಗೂ ಪ್ರೇಕ್ಷಕರು ತಡವಾಗಿಯೇ ಬಂದರು. ಕೋವಿಡ್ ನಂತರ ಪ್ರೇಕ್ಷಕರು ಓಟಿಟಿ ಕಡೆ ವಾಲಿದ್ದಾರೆ. ಮೊದಲು ಒಂದು ವಾರಕ್ಕೆ ಇಷ್ಟೇ ಚಿತ್ರಗಳು ಬಿಡುಗಡೆಯಾಗಬೇಕು ಎಂಬ ನಿಯಮವಿತ್ತು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಡಿತ ಕಳೆದುಕೊಂಡಿದೆ. ಈಗ ಯಾವಾಗ, ಯಾರು ಬೇಕಾದರೂ ಚಿತ್ರ ಬಿಡುಗಡೆ ಮಾಡಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಒಂದೇ ದಿನ ಅಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ನಿರ್ಮಾಪಕರಿಗೆ ಕಷ್ಟವಾಗುತ್ತಿದೆ. ನಿರ್ಮಾಪಕರು ಬದುಕಿದ್ದರೆ ಸಿನಿಮಾಗಳು ಆಗುತ್ತವೆ. ಈ ಬಗ್ಗೆ ಯಾರ ಜೊತೆಗೆ ಮಾತನಾಡಬೇಕೋ ಗೊತ್ತಿಲ್ಲ. ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಸೇರಿದಂತೆ ಸಾಕಷ್ಟು ಸಂಘ-ಸಂಸ್ಥೆಗಳಿವೆ. ಆದರೆ ಅಂಡರ್ಸ್ಟ್ಯಾಂಡಿಂಗ್ ಇಲ್ಲ. ಮುಂದಿನ ದಿನಗಳಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಫಾರ್ ರಿಜಿಸ್ಟ್ರೇಷನ್' ರಿಲೀಸ್: ಭಾರಿ ಮೊತ್ತಕ್ಕೆ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್
ಅಷ್ಟಕ್ಕೂ ಜನ ಯಾಕೆ ಒಳ್ಳೆಯ ಚಿತ್ರಗಳ ಕೈಹಿಡಿಯುತ್ತಿಲ್ಲ?, ಓಟಿಟಿಗೆ ಬರಲಿ ಎಂದು ಕಾಯುತ್ತಿದ್ದಾರಾ? ಇದೊಂದು ಕ್ಲಾಸ್ ಚಿತ್ರ ಎಂದು ಪ್ರೇಕ್ಷಕರು ಚಿತ್ರ ನೋಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರಾ? ಕನ್ನಡದಲ್ಲೇ ಹೆಚ್ಚು ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಯಾವುದು ನೋಡಬೇಕು, ಯಾವುದು ಬಿಡಬೇಕು ಎಂಬ ಗೊಂದಲ ಪ್ರೇಕ್ಷಕರನ್ನು ಕಾಡುತ್ತಿದೆಯಾ? ಉತ್ತರ ಮಾತ್ರ ಯಾರಿಗೂ ಗೊತ್ತಿಲ್ಲ. ಹಾಗಾಗಿ, ಒಂದು ಕಡೆ ಚಿತ್ರದ ಬಗ್ಗೆ ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಖುಷಿಯ ಜೊತೆಗೆ, ಚಿತ್ರವನ್ನು ಜನರಿಗೆ ಹೇಗೆ ತಲುಪಿಸಬೇಕು ಎಂಬುದು ಅರ್ಥವಾಗದೇ ಚಿತ್ರತಂಡದವರು ಗೊಂದಲದಲ್ಲಿದ್ದಾರೆ.
ಇದನ್ನೂ ಓದಿ: 'ಕ್ರೆಕ್' ರಿಲೀಸ್: ಆರ್ಟಿಕಲ್ 370ರ ಜೊತೆ ಬಾಕ್ಸ್ ಆಫೀಸ್ ಫೈಟ್
ಹೀಗಿರುವಾಗಲೇ ಇಂದು ಕೂಡಾ ಏಳು ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ವಾರ 12 ಚಿತ್ರಗಳು ಬಿಡುಗಡೆಯಾಗಿದ್ದವು. ಅದರ ಹಿಂದಿನ ವಾರ 6. ಅದಕ್ಕೂ ಮುನ್ನ 5. ಒಟ್ಟಾರೆ, ಈ ತಿಂಗಳ ನಾಲ್ಕು ವಾರಗಳಲ್ಲಿ ಸರಿಸುಮಾರು 30 ಸಿನಿಮಾಗಳು ಬಿಡುಗಡೆಯಾದಂತಾಗುತ್ತದೆ. ಆದ್ರೆ ಯಾವ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಪ್ರೇಕ್ಷಕರ ಸಂಖ್ಯೆ ಇಳಿಕೆ ಕಂಡಿರೋದು ಮಾತ್ರ ದುರಂತ.