ಚೆನ್ನೈ(ತಮಿಳುನಾಡು): ದೇಶದ 21 ರಾಜ್ಯಗಳಲ್ಲಿ ಇಂದು ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳುನಾಡಿನಲ್ಲೂ ಬಿರುಸಿನಿಂದ ಮತದಾನ ಸಾಗುತ್ತಿದೆ. ಖ್ಯಾತ ತಮಿಳು ನಟ ದಳಪತಿ ವಿಜಯ್ ಮತ ಹಕ್ಕು ಚಲಾಯಿಸಿ ಗಮನ ಸೆಳೆದರು.
ಎರಡು ತಿಂಗಳ ಹಿಂದೆ ರಾಜಕೀಯ ಪ್ರವೇಶಿಸಿರುವ ವಿಜಯ್, ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ವೆಂಕಟ್ ಪ್ರಭು ನಿರ್ದೇಶನದ ಗೋಟ್ (GOAT - The Greatest of All Times) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕೆಲಸಗಳ ನಡುವೆ ಮತ ಚಲಾಯಿಸಲೆಂದೇ ಇತ್ತೀಚೆಗೆ ರಷ್ಯಾದಿಂದ ಮರಳಿದ್ದರು. ಇಂದು ಚೆನ್ನೈನ ನೀಲಂಕಾರೈನಲ್ಲಿ ಮತಗಟ್ಟೆಯಲ್ಲಿ ವೋಟ್ ಮಾಡಿದರು.
ಮತದಾನಕ್ಕೆ ನೆಚ್ಚಿನ ನಟ ಬರುವ ವಿಷಯ ತಿಳಿದ ಅಭಿಮಾನಿಗಳು ಮತಗಟ್ಟೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸ್ ಭದ್ರತೆಯಲ್ಲಿ ಮತಗಟ್ಟೆಯೊಳಗೆ ತೆರಳಿದ ವಿಜಯ್ ತಮ್ಮ ಹಕ್ಕು ಚಲಾಯಿಸಿದರು.
ತಮಿಳಗ ವೆಟ್ರಿ ಕಳಗಂನ ಮೂಲಕ ಪಾರದರ್ಶಕತೆ, ಸಮಾನತೆ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸುವುದು ಸೇರಿದಂತೆ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ತರುವ ಗುರಿ ಹೊಂದಿರುವುದಾಗಿ ವಿಜಯ್ ಈಗಾಗಲೇ ಹೇಳಿದ್ದಾರೆ. ರಾಜಕೀಯ ಕೇವಲ ವೃತ್ತಿಯ ಆಯ್ಕೆಯಲ್ಲ, ಜನಸೇವೆಗೆ ತನ್ನ ದೃಢವಾದ ಬದ್ಧತೆ ಎಂದಿದ್ದಾರೆ.
ಇದೇ ವೇಳೆ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಭಾಗವಹಿಸುವುದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷದೊಂದಿಗೂ ಸೇರುವುದಿಲ್ಲ ಎಂದೂ ವಿಜಯ್ ಸ್ಪಷ್ಟಪಡಿಸಿದ್ದಾರೆ.
ವೋಟ್ ಮಾಡಿದ ಖ್ಯಾತನಾಮರು: ತಮಿಳಿನ ಹಲವು ಖ್ಯಾತ ನಟರೂ ಸಹ ತಮ್ಮ ಮತ ಚಲಾಯಿಸಿದರು. ಸೂಪರ್‌ಸ್ಟಾರ್ ರಜನಿಕಾಂತ್ ಬೆಳಿಗ್ಗೆ ಚೆನ್ನೈನ ಪೋಯಸ್ ಗಾರ್ಡನ್ ಮತಗಟ್ಟೆಯಲ್ಲಿ ವೋಟ್ ಮಾಡಿದರು. ನಟ ಧನುಷ್ ಆಳ್ವಾರಪೇಟೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಮತ ಚಲಾಯಿಸಿದರು. ಹಿರಿಯ ನಟ ಕಮಲ್ ಹಾಸನ್ ಎಲ್ಡಮ್ಸ್ ರಸ್ತೆಯಲ್ಲಿರುವ ಚೆನ್ನೈ ಹೈಸ್ಕೂಲ್‌ಗೆ ಆಗಮಿಸಿ ಮತ ಹಾಕಿದರು. ವಿಜಯ್ ಸೇತುಪತಿ ಮತ ಹಕ್ಕು ಚಲಾಯಿಸಿದರು.
ಕಮಲ್ ಹಾಸನ್ ಮಕ್ಕಳ್ ನೀಧಿ ಮೈಯಂ ಪಕ್ಷದ ಅಧ್ಯಕ್ಷರಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆಗೆ ತಮ್ಮ ಬೆಂಬಲ ಘೋಷಿಸಿ, ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.