ಈ ವಾರ ಹಲವು ಬಹುನಿರೀಕ್ಷಿತ ಸಿನಿಮಾಗಳ ಬಿಡುಗಡೆ ಜೊತೆ ಜೊತೆಗೆ ನಟರುಗಳಿಗೆ ಸಂಬಂಧಿಸಿದ ವಿವಾದಗಳು, ಪ್ರಕರಣಗಳು ವ್ಯಾಪಕವಾಗಿ ನೆಟ್ಟಿಗರ ಗಮನ ಸೆಳೆದಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸೆಲೆಬ್ರಿಟಿಗಳಿಗೇನೆ ಸಂಬಂಧಿಸಿರುವ ವಿಚಾರಗಳಿವು.
ನೆಟ್‌ಫ್ಲಿಕ್ಸ್‌ನಲ್ಲಿ 'ಮಹಾರಾಜ್' ರಿಲೀಸ್ಗೆ ಗುಜರಾತ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅವಹೇಳನಕಾರಿ ವಿಷಯಗಳ ಆರೋಪದಡಿ 'ಹಮಾರೆ ಬಾರಾ' ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. 90 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಉದ್ಯಮಿ ರಾಜ್ ಕುಂದ್ರಾ ವಿರುದ್ಧ ತನಿಖೆಗೆ ಮುಂಬೈ ನ್ಯಾಯಾಲಯ ಆದೇಶಿಸಿದೆ. ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲಾಗಿದೆ. ಜೊತೆಗೆ, ತಪ್ಪುದಾರಿಗೆಳೆಯುವ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರವೀನಾ ಟಂಡನ್ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.
1) ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ತೂಗುದೀಪ ಅರೆಸ್ಟ್: ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ, ಸ್ನೇಹಿತೆ ಪವಿತ್ರಾ ಗೌಡ ಸೇರಿ 13 ಮಂದಿಯ ಪೊಲೀಸ್ ಕಸ್ಟಡಿಯನ್ನು ನಿನ್ನೆ ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ವಿಸ್ತರಿಸಿದೆ. ಹೆಚ್ಚಿನ ನಿಖರ ಸಾಕ್ಷ್ಯಗಳನ್ನು ಪಡೆಯಲು ಪೊಲೀಸರಿಗೆ ಅವಕಾಶ ನೀಡಲು ನ್ಯಾಯಾಲಯವು ಪೊಲೀಸ್ ಕಸ್ಟಡಿ ವಿಸ್ತರಿಸಿತು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದಡಿ ಅಭಿಮಾನಿ ರೇಣುಕಾಸ್ವಾಮಿಗೆ ದರ್ಶನ್ ತಂಡ ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆಂಬ ಆರೋಪವಿದೆ. ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಾಕಷ್ಟು ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ನಿಖರ ಮಾಹಿತಿಗಾಗಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
2) 'ಮಹಾರಾಜ್' ಬಿಡುಗಡೆಗೆ ತಡೆಯಾಜ್ಞೆ: 'ಪುಷ್ಟಿಮಾರ್ಗ್'ನ ಎಂಟು ಅನುಯಾಯಿಗಳಿಂದ ಬಂದ ಆಕ್ಷೇಪಣೆ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಜುನೈದ್ ಖಾನ್ ಅಭಿನಯದ 'ಮಹಾರಾಜ್' ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದೆ. ಸಿನಿಮಾ ತಮ್ಮ ಪಂಗಡದ ಬಗ್ಗೆ ಅಸಮಾಧಾನ ಸೃಷ್ಟಿಯಾಗಲು ಕಾರಣವಾಗಬಹುದು ಎಂದು ಅರ್ಜಿದಾರರು ಭಾವಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ತಡೆಯಾಜ್ಞೆಯನ್ನು ಹಿಂತೆಗೆದುಕೊಳ್ಳಲು ತುರ್ತು ವಿಚಾರಣೆ ಕೋರಿದವು. ಆದರೆ ನ್ಯಾಯಮೂರ್ತಿ ಸಂಗೀತಾ ವಿಶೆನ್ ನಿರಾಕರಿಸಿ, ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿದರು. ಈ ಸಿನಿಮಾ ವೈಷ್ಣವಿಸಂ ಅನುಯಾಯಿಗಳ 2013ರ ಪುಸ್ತಕವನ್ನು ಆಧರಿಸಿದ್ದು, ಮಾನಹಾನಿಕರವಾಗಿಲ್ಲ ಎಂದು ಚಿತ್ರತಂಡ ತಿಳಿಸಿದೆ.
3) 'ಹಮಾರೆ ಬಾರಾ' ಬಿಡುಗಡೆಗೆ ಸುಪ್ರೀಂ ತಡೆ: ಹಮಾರೆ ಬರಾ ಚಿತ್ರದ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿದ್ದು, ಚಿತ್ರ ಇಸ್ಲಾಮಿಕ್ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರ ಬಗ್ಗೆ ಸ್ಪಷ್ಟವಾಗಿ ತೋರಿಸಿಲ್ಲ ಎಂದು ಆರೋಪಿಸಿ ಸಲ್ಲಿಸಿದ ಮನವಿಯ ಕುರಿತು ತಮ್ಮ ನಿರ್ಧಾರವನ್ನು ನೀಡುವಂತೆ ಹೈಕೋರ್ಟ್‌ಗೆ ನಿರ್ದೇಶಿಸಿದೆ. ಸಿನಿಮಾ ಬಿಡುಗಡೆಗೆ ತಡೆ ನೀಡಿದ ಬಾಂಬೆ ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಪ್ರಶ್ನಿಸುವ ಮನವಿಯನ್ನು ಇದು ಅನುಸರಿಸುತ್ತದೆ. ಚಿತ್ರತಂಡ ಟ್ರೇಲರ್‌ನಿಂದ ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆದುಹಾಕಿದ್ದರೂ, ಸುಪ್ರೀಂ ಕೋರ್ಟ್ ಟ್ರೇಲರ್ ಇನ್ನೂ ಆಕ್ರಮಣಕಾರಿಯಾಗಿದೆ ಎಂದು ಭಾವಿಸಿದೆ. ಹಣಕಾಸಿನ ನಷ್ಟದ ಬಗೆಗಿನ ನಿರ್ಮಾಪಕರ ವಾದವನ್ನು ತಳ್ಳಿಹಾಕಲಾಗಿದೆ. ಈ ಹಿಂದೆ, ಚಿತ್ರವು 1952ರ ಸಿನಿಮಾಟೋಗ್ರಾಫ್ ಕಾಯ್ದೆ ಮತ್ತು ಸಾಂವಿಧಾನಿಕ ಲೇಖನಗಳನ್ನು ಉಲ್ಲಂಘಿಸುತ್ತದೆ, ಇಸ್ಲಾಂ ಮತ್ತು ಮುಸ್ಲಿಂ ಮಹಿಳೆಯರನ್ನು ನೆಗೆಟಿವ್ ಆಗಿ ಚಿತ್ರಿಸುತ್ತದೆಯಂದು ಹೈಕೋರ್ಟ್ ಅರ್ಜಿಯೊಂದು ವಾದಿಸಿತ್ತು. ಆಕ್ಷೇಪಾರ್ಹ ಡೈಲಾಗ್ಗಳನ್ನು ತೆಗೆದುಹಾಕುವ ಮತ್ತು ಪರಿಶೀಲನಾ ಸಮಿತಿ ರಚಿಸುವ ಷರತ್ತಿನ ಮೇಲೆ ತಡೆಯಾಜ್ಞೆಯನ್ನು ಹೈಕೋರ್ಟ್ ಆರಂಭದಲ್ಲಿ ಹಿಂತೆಗೆದುಕೊಂಡಿದ್ದರೂ, ಅಂತಿಮ ನಿರ್ಧಾರಕ್ಕೆ ಬರುವವರೆಗೆ ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆ.
4) 90 ಲಕ್ಷ ರೂ. ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ತನಿಖೆ: ಗೋಲ್ಡ್ ಸ್ಕೀಮ್ನಲ್ಲಿ ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಪತಿ ರಾಜ್ ಕುಂದ್ರಾ ಸೇರಿ ಹಲವರನ್ನು ತನಿಖೆ ಮಾಡಲು ಮುಂಬೈ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಪೃಥ್ವಿರಾಜ್ ಕೊಠಾರಿ ಅವರು ಸಲ್ಲಿಸಿರುವ ದೂರಿನಲ್ಲಿ, 2014ರ ಹೂಡಿಕೆ ಯೋಜನೆಯಡಿ 90,38,600 ರೂಪಾಯಿಗಳನ್ನು ಪಾವತಿಸಿದ್ದರೂ ಕುಂದ್ರಾ ಕಂಪನಿ, ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಭರವಸೆ ನೀಡಿದ್ದ 5,000 ಗ್ರಾಂ ಚಿನ್ನವನ್ನು ತಲುಪಿಸಲು ವಿಫಲವಾಗಿದೆ. ಪ್ರಕರಣದ ಪ್ರಾಥಮಿಕ ಸಾಕ್ಷ್ಯ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹಾಗಾಗಿ ಸಂಭಾವ್ಯ ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯನ್ನು ಉಲ್ಲೇಖಿಸಿ, ಅನ್ವಯಿಸಿದರೆ ಎಫ್‌ಐಆರ್ ದಾಖಲಿಸಲು ಬಿಕೆಸಿ ಪೊಲೀಸರಿಗೆ ನಿರ್ದೇಶಿಸಿದೆ.
5) 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ರವೀನಾ ಟಂಡನ್: ಇತ್ತೀಚೆಗೆ ನಟಿಯ ವಿಡಿಯೋವೊಂದು ವೈರಲ್ ಆಗಿತ್ತು. 'ರಸ್ತೆಯಲ್ಲಿ ಗಲಾಟೆ' ಎಂದು ಸುಳ್ಳು ಆರೋಪ ಹೊರಿಸಿದ ವಿಡಿಯೋವನ್ನು ತೆಗೆದುಹಾಕಲು ನಿರಾಕರಿಸಿದ ವ್ಯಕ್ತಿಯೊಬ್ಬನ ವಿರುದ್ಧ ಬಾಲಿವುಡ್ ನಟಿ ರವೀನಾ ಟಂಡನ್ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಟಿಯ ಕಾರು ಆ ವ್ಯಕ್ತಿಯ ತಾಯಿಗೆ ಡಿಕ್ಕಿ ಹೊಡೆದಿದೆ, ಅಲ್ಲದೇ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋ ತಿಳಿಸಿತ್ತು. ಆದ್ರೆ ಮುಂಬೈ ಪೊಲೀಸ್ ತನಿಖೆ ಪ್ರಕಾರ, ಈ ಘಟನೆ ಸಂಭವಿಸಿಲ್ಲ. ಹಾಗಾಗಿ ವಿಡಿಯೋ ಡಿಲೀಟ್ ಮಾಡಲು ನಟಿ ವಿನಂತಿಸಿದ್ದರೂ, ವ್ಯಕ್ತಿ ನಿರಾಕರಿಸಿದ್ದಾನೆ. ನಟಿಯ ವಕೀಲರಾದ ಸನಾ ರಯೀಸ್ ಖಾನ್ ಮಾತನಾಡಿ, ವ್ಯಕ್ತಿಯ ನಡೆ ನಟಿಯ ಖ್ಯಾತಿಯನ್ನು ಹಾಳುಮಾಡಲು ಮತ್ತು ಆತ ಜನಪ್ರಿಯತೆ ಗಳಿಸುವ ಒಂದು ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಕಾನೂನು ಪ್ರಕ್ರಿಯೆ ಮುಂದುವರಿದಿದೆ.
ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸ್ಟೂಡೆಂಟ್ ಪಾರ್ಟಿ ಸಾಂಗ್ ಬಿಡುಗಡೆ - Students Party Song