ಬಾಲಿವುಡ್ ಸಿನಿಮಾ 'ಲಾಪತಾ ಲೇಡಿಸ್' ಸ್ಕ್ರೀನಿಂಗ್ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಡೆಯಿತು. ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅವರು ನಿರ್ದೇಶಕಿ ಕಿರಣ್ ರಾವ್ ಜೊತೆ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 'ಲಾಪತಾ ಲೇಡಿಸ್' ಜೊತೆ ಮುಂಬರುವ ಪ್ರಾಜೆಕ್ಟ್ ಬಗ್ಗೆಯೂ ಅಭಿಮಾನಿಗಳೊಂದಿಗೆ ನಟ ಮಾತನಾಡಿದರು.
ಅಮೀರ್ ಖಾನ್ ತಮ್ಮ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್ 'ಸಿತಾರೆ ಝಮೀನ್ ಪರ್' ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಇದು 'ತಾರೆ ಝಮೀನ್ ಪರ್'ನ ಮುಂದುವರೆದ ಭಾಗ. ಹೊಸ ಕಥಾಹಂದರ ಮತ್ತು ಪಾತ್ರಗಳಿದ್ದು ಭಿನ್ನವಾಗಿ ಮೂಡಿಬರಲಿದೆ. ಈ ಚಿತ್ರ ಕಣ್ಣೀರಿನ ಬದಲು ನಗು ಹೊಮ್ಮಿಸುತ್ತದೆ ಎಂದು ವಿವರಿಸಿದರು.
ಅಮೀರ್ ಖಾನ್ ಕೊನೆಯದಾಗಿ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ನಟಿಸಿದ್ದರು. 2022ರಲ್ಲಿ ಬಿಡುಗಡೆಯಾದ ಈ ಸಿನಿಮಾ ನಿರೀಕ್ಷೆ ತಲುಪಲಿಲ್ಲ. ಅದಾದ ಬಳಿಕ ಸಿನಿಮಾಗಳಿಂದ ದೂರ ಉಳಿದು ಕುಟುಂಬಕ್ಕೆ ಸಮಯ ಮೀಸಲಿಟ್ಟರು. ಹೀಗಾಗಿ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ.
'ಲಾಪತಾ ಲೇಡಿಸ್' ಸ್ಕ್ರೀನಿಂಗ್ ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಮುಂದಿನ ಪ್ರಾಜೆಕ್ಟ್ ಕುರಿತು ಕೆಲವು ಅಪ್ಡೇಟ್ಸ್ ಒದಗಿಸಿದರು. "ಸಿತಾರೆ ಝಮೀನ್ ಪರ್ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಈ ವರ್ಷದ ಕ್ರಿಸ್ಮಸ್‌ಗೆ ಬಿಡುಗಡೆಗೊಳಿಸುವ ಗುರಿ ಇದೆ" ಎಂದು ತಿಳಿಸಿದರು.
ಪ್ರಸನ್ನ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಜೆನಿಲಿಯಾ ಡಿಸೋಜಾ ಅವರಿಗೆ ಮುಖ್ಯಭೂಮಿಕೆಯ ಪಾತ್ರವಿದೆ. ಅಮೀರ್ ಪಾತ್ರವರ್ಗದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 70ರಿಂದ 80 ದಿನಗಳ ಕಾಲದ ಶೂಟಿಂಗ್ಗೆ ಸಜ್ಜಾಗಿದ್ದಾರೆ. ಕುಟುಂಬಕ್ಕೆ ಸಮಯ ನೀಡುತ್ತಿರುವ 58ರ ಹರೆಯದ ನಟ ಉತ್ತಮ ಕಥೆಯೊಂದಿಗೆ ಸಿನಿಮಾಗೆ ಮರಳಲು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ಸಹನಟರ ಬ್ರೊಮ್ಯಾನ್ಸ್: ಸ್ಟಂಟ್ ಫೋಟೋ ಹಂಚಿಕೊಂಡ ಅಕ್ಷಯ್ ಕುಮಾರ್-ಟೈಗರ್ ಶ್ರಾಫ್
ಅಮೀರ್ ತಮ್ಮ ಸಿನಿಮಾ ಬ್ಯಾನರ್ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಅಡಿಯಲ್ಲಿ ಹಲವು ಪ್ರೊಜೆಕ್ಟ್ಗಳನ್ನು ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಸನ್ನಿ ಡಿಯೋಲ್ ಜೊತೆ 'ಲಾಹೋರ್ 1947' ಯೋಜನೆ ಹೊಂದಿದ್ದಾರೆ. ಮಗ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಅವರ ರೊಮ್ಯಾಂಟಿಕ್ ಸಿನಿಮಾ ನಿರ್ಮಿಸಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಜಪಾನ್‌ನಲ್ಲಿ ನಡೆಯುತ್ತಿದೆ. ಸಿತಾರೆ ಝಮೀನ್ ಪರ್ ಅಲ್ಲದೇ ಮಗ ಜುನೈದ್ ನಿರ್ಮಾಣದ ಚೊಚ್ಚಲ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಕಿರಣ್ ರಾವ್ ನಿರ್ದೇಶನದ, ಅಮೀರ್ ಖಾನ್ ನಿರ್ಮಾಣದ 'ಲಾಪತಾ ಲೇಡಿಸ್' ಮಾರ್ಚ್ 1ರಂದು ತೆರೆಗಪ್ಪಳಿಸಲಿದೆ.
ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ವಿಶೇಷವಾಗಿ ಶುಭ ಕೋರಿದ ನಾಗ ಚೈತನ್ಯ- ಸಾಯಿ ಪಲ್ಲವಿ: ವಿಡಿಯೋ ನೋಡಿ