ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ಅಂಬರೀಷ್ ಅವರ ಕಾಲದಲ್ಲಿ ಸಿನಿಮಾ ಬಿಡುಗಡೆ ಯಾವಾಗ? ಎಂದು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದರು. ಆದರೆ ಹೊಸ ಹೊಸ ಟೆಕ್ನಾಲಜಿಗಳು, ವೇದಿಕೆಗಳು ಬರುತ್ತಿದ್ದಂತೆ ಬದಲಾವಣೆಗಳಾದವು. ಸಿನಿಮಾಗಳ ಅದ್ಧೂರಿ ಮೇಕಿಂಗ್, ನಿರ್ಮಾಣದ ಕ್ವಾಲಿಟಿ, ದೊಡ್ಡ ದೊಡ್ಡ ಸ್ಟಾರ್ ಕಾಸ್ಟ್ ಹೀಗೆ ಸಿನಿಮಾ ವಿಚಾರದಲ್ಲಿ ಬದಲಾವಣೆಗಳಾದವು.
ಇದರ ಜೊತೆಗೆ ಸಿನಿಮಾ ಪ್ರಚಾರಕ್ಕೆ ಟೀಸರ್, ಟ್ರೇಲರ್, ಮೋಷನ್ ಪಿಕ್ಚರ್ಸ್ ಹೀಗೆ ಹೊಸ ಟ್ರೆಂಡ್ ಶುರುವಾಯಿತು. ಈ ಟ್ರೆಂಡ್ನಿಂದಾಗಿ ಆ ಸಿನಿಮಾದ ಕಥೆ ಏನು? ಆ ಚಿತ್ರದಲ್ಲಿ ಹೀರೋ ಲುಕ್ ಹೇಗಿದೆ? ಮೇಕಿಂಗ್ ಹೇಗಿದೆ? ಎಂದು ಎರಡ್ಮೂರು ನಿಮಿಷಗಳಲ್ಲಿ ಸಿನಿ ಪ್ರೇಕ್ಷಕರು ಈ ಸಿನಿಮಾ ಹಿಟ್? ಅಥವಾ ಫ್ಲಾಪ್? ಅನ್ನೋದನ್ನು ಡಿಸೈಡ್ ಮಾಡುವ ಸಂಸ್ಕೃತಿ ಬಂದುಬಿಟ್ಟಿದೆ. ಅದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸರಾಜ್ ಅಣ್ಣಾವ್ರ ಕಾಲದ ಥಿಯರಿಯನ್ನು ಅನುಸರಿಸಲು ಮುಂದಾಗಿದ್ದಾರೆ.
ಹೌದು, ಈ ಹಿಂದೆ ಟ್ರೇಲರ್ ಸಂಸ್ಕೃತಿ ಇರಲಿಲ್ಲ. ಪ್ರೇಕ್ಷಕರು ನೇರವಾಗಿ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿದ್ದರು. ಚಿತ್ರಗಳು ಯಶ ಕಾಣುತ್ತಿದ್ದವು. ಈ ಸೂತ್ರವನ್ನು ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೃಷ್ಣಂ ಪ್ರಣಯ ಸಖಿ' ತಂಡ ಬಳಸಲು ಮುಂದಾಗಿದೆ.
ಟ್ರೇಲರ್ ಬಿಡುಗಡೆ ಬಗ್ಗೆ ಮಾತನಾಡಿದ ಗಣೇಶ್, ನಾನು, ನಿರ್ದೇಶಕ ಶ್ರೀನಿವಾಸರಾಜ್ ಹಾಗೂ ನಮ್ಮ ಚಿತ್ರ ನಿರ್ಮಾಪಕರಾದ ಪ್ರಶಾಂತ್ ಜಿ ರುದ್ರಪ್ಪ ಮಾತನಾಡಿಕೊಂಡು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡದೇ, ಡೈರೆಕ್ಟ್ ಆಗಿ ಚಿತ್ರಮಂದಿರದಲ್ಲಿ ನಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ನಟ, ಇದು ಸೋಷಿಯಲ್ ಮೀಡಿಯಾ ಜಮಾನ. ಹಾಗೇ ಸಿನಿಮಾ ನೋಡುವ ಜನರ ಅಭಿರುಚಿ ಕೂಡಾ ಬದಲಾಗಿದೆ. ಅಣ್ಣಾವ್ರ ಕಾಲದಲ್ಲಿ ಟೀಸರ್, ಟ್ರೇಲರ್ ಸಂಸ್ಕೃತಿ ಇರಲಿಲ್ಲ. ಆಗ ನೇರವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿ, ಆ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿದ್ದವು. ಆ ಥಿಯರಿಯನ್ನ ಈ ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ಶುರು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದಂಡುಪಾಳ್ಯ ಅತಂಹ ರಿಯಲ್ ಸ್ಟೋರಿಗಳನ್ನು ಮಾಡುತ್ತಿದ್ದ ನಿರ್ದೇಶಕ ಶ್ರೀನಿವಾಸರಾಜ್ ಕೂಡ ಈ ಬಾರಿ ರೊಮ್ಯಾಂಟಿಕ್ ಚಿತ್ರ ಮಾಡ್ತಾ ಇದ್ದಾರೆ. ನಿರ್ದೇಶಕರು, ಮಾತನಾಡಿ ನಮ್ಮ ಸಿನಿಮಾದ ಹಾಡುಗಳು ಮತ್ತು ಪೋಸ್ಟರ್ಗಳು ದೊಡ್ಡ ಮಟ್ಟದಲ್ಲಿ ಟಾಕ್ ಆಗುತ್ತಿದೆ. ಈಗಾಗ್ಲೇ ರಿಲೀಸ್ ಆಗಿರೋ ಚಿನ್ನಮ್ಮ ಹಾಡನ್ನ ಬರೋಬ್ಬರಿ 11 ಮಿಲಿಯನ್ ಜನ ನೋಡಿದ್ದಾರೆ ಅಂದ್ರೆ ಚಿತ್ರದಲ್ಲಿ ಕಂಟೆಂಟ್ ಇದೆ, ಅವರೂ ನಮ್ಮ ಚಿತ್ರವನ್ನ ನೋಡುವ ಉತ್ಸಾಹ ತೋರಿಸುತ್ತಿದ್ದಾರೆ. ಅದಕ್ಕೆ ನಾವು ಹಳೆ ಕಾಲದ ಸೂತ್ರವನ್ನ ಅಂದ್ರೆ ಟ್ರೈಲರ್ ಬಿಡದೆ ನೇರವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಈ ಮೂಲಕ ಸಿನಿಮಾ ಪ್ರೇಕ್ಷಕರನ್ನ ಚಿತ್ರಮಂದಿರಗಳಿಗೆ ಕರೆಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಅಂದರು.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ಚಿತ್ರವಾಗಿರೋ ಕೃಷ್ಣಂ ಪ್ರಣಯ ಸಖಿ ಔಟ್ ಅಂಡ್ ಔಟ್ ರೊಮ್ಯಾಂಟಿಕ್ ಚಿತ್ರ. ಈಗಾಗಲೇ ಅನಾವರಣಗೊಂಡಿರುವ ಚಿತ್ರದ ಹಾಡುಗಳು ಈಗಾಗಲೇ ಸಿನಿ ಪ್ರೇಮಿಗಳ ಮನಸ್ಸು ಕದಿಯುತ್ತಿದೆ. ದ್ವಾಪರ ಎಂಬ ಹಾಡಿನ ಪ್ರೋಮೋ ರಿಲೀಸ್ ಮಾಡುವ ಮೂಲಕ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿದೆ.
ಗಣೇಶ್ ಮ್ಯಾನರಿಸಂ ತಕ್ಕಂತೆ ಸಾಹಿತಿ ವಿ ನಾಗೇಂದ್ರ ಬರೆದಿರುವ ಪದಗಳಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕ್ಯಾಚೀ ಟ್ಯೂನ್ ಹಾಕಿದ್ದು, ಇತ್ತೀಚೆಗೆ ಸರಿಗಮ ಶೋನಲ್ಲಿ ಗಮನ ಸೆಳೆದಿದ್ದ ಜಸ್ಕರಣ್ ಸಿಂಗ್ ಕೈಯಲ್ಲಿ ಈ ಹಾಡನ್ನು ಅರ್ಜುನ್ ಜನ್ಯ ಹಾಡಿಸಿರೋದು ವಿಶೇಷ. ನಾಳೆ ದ್ವಾಪರ ಹಾಡು ಆನಂದ್ ಆಡಿಯೋದಲ್ಲಿ ಬಿಡುಗಡೆ ಆಗುತ್ತಿದೆ.
ಗಣೇಶ್ಗೆ ಜೋಡಿಯಾಗಿ ಮಲಯಾಳಂ ಬೆಡಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ಇದನ್ನೂ ಓದಿ: ಅನು ಪ್ರಭಾಕರ್ 'ಹಗ್ಗ' ಸಿನಿಮಾಗೆ ನಿರ್ದೇಶಕ ಆರ್ ಚಂದ್ರು ಸಾಥ್; ಟೀಸರ್ ರಿಲೀಸ್ - Hagga Teaser
ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವೆಂಕಟ್ ರಾಮ್ ಪ್ರಸಾದ್ ಕ್ಯಾಮರ ವರ್ಕ್ ಇದ್ದು, ಎವಿ ಶಿವಸಾಯಿ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಇದೆ. ಶರತ್ ಭೋಜರಾಜ ಈ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ಹಾಡುಗಳು ಹಾಗೂ ಕಂಟೆಂಟ್ ನಿಂದಾಗ ಸದ್ದು ಮಾಡುತ್ತಿರೋ ಕೃಷ್ಣಂ ಪ್ರಣಯ ಸಖಿ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಟ್ರೇಲರ್ ಇಲ್ಲದೇ ಡೈರೆಕ್ಟ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಕೃಷ್ಣಂ ಪ್ರಣಯ ಸಖಿ ಚಿತ್ರ ಗೋಲ್ಡನ್ ಸ್ಟಾರ್ ಜನಪ್ರಿಯತೆ ಹೆಚ್ಚಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.