'ಯಲಾಕುನ್ನಿ', ಈ ಡೈಲಾಗ್ ಅನ್ನು ಕನ್ನಡ ಸಿನಿಪ್ರೇಮಿಗಳು ಮರೆಯಲು ತಾನೆ ಹೇಗೆ ಸಾಧ್ಯ ಹೇಳಿ. ಖಳನಟರ ಖಳನಟ ದಿವಂಗತ ವಜ್ರಮುನಿ ಅವರ ಫೇಮಸ್ ಡೈಲಾಗ್ ಇದು. ಈ ಡೈಲಾಗ್ ಅನ್ನೇ ಸಿನಿಮಾ ಶೀರ್ಷಿಕೆಯಾಗಿಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಚಿತ್ರತಂಡವೊಂದು ಮುಹೂರ್ತ ಮುಗಿಸಿ ಸಖತ್ ಸದ್ದು ಮಾಡಿತ್ತು.
ವಿಭಿನ್ನ ಪಾತ್ರಗಳ ಮೂಲಕ ಜನ ಮನ ಗೆದ್ದಿರುವ ನಟ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಹೊಸ ಪ್ರತಿಭೆ ಎನ್ ಆರ್ ಪ್ರದೀಪ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಕೂಡಾ ಇವರದ್ದೇ. ಸದ್ಯ ಚಿತ್ರತಂಡ ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿದೆ. ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗಿತ್ತು.
ಹಾಸ್ಯನಟ ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಕೋಮಲ್ ಅವರ ಜೊತೆಗೆ ದೊಡ್ಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್, ಮಾನಸಿ ಸುಧೀರ್ (ಕಾಂತಾರ), ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ, ಮಹಾಂತೇಶ್, ಬೌಬೌ ಜಯರಾಮ್, ನಿರ್ದೇಶಕ ಸಹನ ಮೂರ್ತಿ, ಭಜರಂಗಿ ಪ್ರಸನ್ನ, ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ಮಂತಾದವರ ತಾರಾಬಳಗವಿರುವ ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ.
ವಿಶೇಷವಾಗಿ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ. ಮಯೂರ್ ಪಟೇಲ್ ಅವರು ಖಳ ನಾಯಕನಾಗಿ ನಟಿಸಿದ್ದಾರೆ. ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ ಯಲಾಕುನ್ನಿ ಸಿನಿಮಾವನ್ನ ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. "ಯಲಾಕುನ್ನಿ" ಚಿತ್ರಕ್ಕೆ 'ಮೇರಾ ನಾಮ್ ವಜ್ರಮುನಿ' ಎಂಬ ಅಡಿಬರಹವಿದೆ. ಸದ್ಯ ಶೂಟಿಂಗ್ ಮುಗಿಸಿರೋ ಯಲಾಕುನ್ನಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರದ ಟೈಟಲ್ನಿಂದ ಗಮನ ಸೆಳೆಯುತ್ತಿರುವ ಯಲಾಕುನ್ನಿ ಚಿತ್ರ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದೆ ಎಂಬ ವಿಶ್ವಾಸವಿದೆ.