ಬೆಂಗಳೂರು: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಖ್ಯಾತ ನಿರೂಪಕಿ ಅಪರ್ಣಾ ಗುರುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವರ ಮನೆಯಲ್ಲಿ ಇಂದು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚಿತ್ರರಂಗದ ಗಣ್ಯರು, ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.
ನಿರ್ಮಾಪಕ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ''ಆರು ವರ್ಷಗಳ ಕಾಲ ಕರ್ನಾಟಕವನ್ನು ಇಬ್ಬರೂ ನಗಿಸಿದ್ವಿ. ಮಜಾ ಟಾಕೀಸ್ನಲ್ಲಿ ವರಲಕ್ಷ್ಮಿ ಪಾತ್ರ ಬಹಳ ಖ್ಯಾತಿ ಪಡೆಯಿತು. ಆದ್ರೀಗ ಬಹಳ ನೋವಾಗ್ತಿದೆ. ಹಳೇ ಮಾತುಗಳು ತುಂಬಾನೇ ನೆನಪಾಗುತ್ತಿವೆ. ನಾನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ನನ್ನ ತಂದೆಯ ಕಾರ್ಯಕ್ರಮ ನಡೆಸಿಕೊಟ್ಟಿದ್ರು. ಲಂಕೇಶ್ ಬಗ್ಗೆ ಅದ್ಭುತವಾಗಿ ತಿಳಿದುಕೊಂಡಿದ್ರು. ಅವರ ಮಾತಿನಲ್ಲಿ ಕನ್ನಡ ಕೇಳೋದೇ ಒಂದು ಖುಷಿ ಆಗಿತ್ತು. ಆದ್ರೀಗ ತುಂಬಾನೇ ನೋವಿನಿಂದ ನಾವವರನ್ನು ಬೀಳ್ಕೊಡುತ್ತಿದ್ದೇವೆ'' ಎಂದು ತಿಳಿಸಿದರು.
ಹಿರಿಯ ನಟ ದೊಡ್ಡಣ್ಣ ಮಾತನಾಡಿ, ''ಎಲ್ಲರನ್ನೂ ಕನ್ನಡದಿಂದ ಮೋಡಿ ಮಾಡಿದ ಮಗಳು ಅಪರ್ಣಾ. ಪುಟ್ಟಣ್ಣ ಕಣಗಾಲ್ ಅವರ ಸಿನಿಮಾದಿಂದ ಬಂದವರು. ಅವರ ದನಿ ಎಂದಿಗೂ ಚಿರಸ್ಥಾಯಿ'' ಎಂದು ಸ್ಮರಿಸಿದರು.
ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, ಶಿವರಾಜ್ಕುಮಾರ್ ಅವರ ಇನ್ಸ್ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ನಡಿಸಿದ್ದರು. ಅಪ್ಪು ಸಿನಿಮಾದ 100 ದಿನಗಳ ಸಂಭ್ರಮಾಚರಣೆಯನ್ನು ನಡೆಸಿಕೊಟ್ಟಿದ್ದರು. ನಮ್ಮ ಕುಟುಂಬಕ್ಕೆ ಬಹಳ ಹತ್ತಿರದವರು. ನಮ್ಮ ಸುಮಾರು ಸಮಾರಂಭಗಳಲ್ಲಿ ನಿರೂಪಣೆ ಮಾಡಿದ್ದಾರೆ. ಆದ್ರೆ ಇಷ್ಟು ಬೇಗ ನಮ್ಮನ್ನು ಅಗಲಿ ಹೋಗ್ತಾರೆ ಎಂದುಕೊಂಡಿರಲಿಲ್ಲ. ಕನ್ನಡ ಅವರ ಬಾಯಲ್ಲಿ ಕೇಳೋದೇ ಚೆಂದ. ಅಷ್ಟು ಸುಂದರವಾಗಿ ಮಾತನಾಡುತ್ತಿದ್ರು. ಭಾಷೆ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.
ನಟ ಮಂಡ್ಯ ರಮೇಶ್ ಮಾತನಾಡಿ, ''ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಒಂಥರಾ ಗರ ಬಡಿದಂತಾಗಿದೆ. ಅವರ ಕನ್ನಡ ತುಂಬಾನೇ ಖುಷಿ ಕೊಡುತ್ತಿತ್ತು. ಅವರ ಮನುಷ್ಯತ್ವ ಅದಕ್ಕಿಂತ ಖುಷಿ. ಆದ್ರೆ ಇಷ್ಟು ಭೀಕರವಾಗಿ ಸಾವು ಬಂದಿದ್ದು ಮಾತ್ರ ಆಘಾತದಂತೆ ಭಾಸವಾಗುತ್ತಿದೆ. ಕನ್ನಡನಾಡು ಶುದ್ಧ ಕನ್ನಡತಿಯನ್ನು ಕಳೆದುಕೊಂಡಿದೆ. ಚೆಂದವಾಗಿ ಮಾತನಾಡಬಲ್ಲ ಅಪರ್ಣಾ ನಿರೂಪಣೆ ಶಾಲೆ ತೆಗೆಯಬೇಕು ಅಂತಾ ಹೇಳ್ತಿದ್ದೆ. ಆದ್ರೀಗ ಕನ್ನಡದ ದೊಡ್ಡ ಶಕ್ತಿ ಕಣ್ಮರೆಯಾಗಿದೆ. ಭಾಷೆಯ ಮಹತ್ವವನ್ನು ಸೂಕ್ಷ್ಮವಾಗಿ ಬೇರೆಯವರಿಗೆ ತಲುಪಿಸುವ ಕೆಲಸ ಮಾಡ್ತಿದ್ರು. ಶುದ್ಧ ಕನ್ನಡವನ್ನು ಯಾರು ಎಲ್ಲಿಯವರೆಗೂ ಪ್ರೀತಿಸುತ್ತಾರೋ ಅಲ್ಲಿಯವರೆಗೂ ಅಪರ್ಣಾ ನೆನಪಿಲ್ಲಿರುತ್ತಾರೆ. ಮಜಾ ಟಾಕೀಸ್ನಲ್ಲಿ ತುಂಬಾನೇ ತಮಾಷೆ ಮಾಡ್ತಿದ್ರು. ದೊಡ್ಡ ಸಂಸ್ಕಾರವಂತೆ. ಆಸ್ಟ್ರೇಲಿಯಾ ಹೋಗಿದ್ದ ಸಮಯ ತುಂಬಾನೇ ಕಾಡುತ್ತದೆ. ಮಾತೃತ್ವದ ಮನಸ್ಸು ಅವರದ್ದು. ಶುದ್ಧ ತಮಾಷೆಯನ್ನು ಶುದ್ಧ ಕನ್ನಡದಲ್ಲಿ ಮಾಡುತ್ತಿದ್ದದ್ದು ಬಹಳ ವಿಶೇಷ. ಅವರ ತಂದೆ ದೊಡ್ಡ ಪತ್ರಕರ್ತರು. ಅಪ್ಪನ ಹೆಸರು ದಾಟಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡ ಮಗಳು. ಅವರ ಧ್ವನಿಯೇ ವಿಶೇಷ. ಅವರ ಸಂದರ್ಶನಗಳು, ಅವರು ನಡೆಸಿಕೊಟ್ಟ ಕಾರ್ಯಕ್ರಮಗಳು ಅದ್ಭುತ'' ಎಂದು ಗುಣಗಾನ ಮಾಡಿದರು.
ನಟಿ ರೂಪಿಕಾ ಮಾತನಾಡಿ, ''ಅಪರ್ಣಾ ಅಕ್ಕನ ಜೊತೆ ನನ್ನ ಒಡನಾಟ ತುಂಬಾನೇ ವಿಶೇಷ. ನೂರೈವತ್ತು ಎಪಿಸೋಡ್ಗಳಲ್ಲಿ ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಅವರದ್ದು ಮಗು ಮನಸ್ಸು. ಆದ್ರೆ ಎರಡು ವರ್ಷಗಳಿಂದ ಕ್ಯಾನ್ಸರ್ ಇದ್ದದ್ದು ಮಾತ್ರ ಶಾಕಿಂಗ್. ಕನ್ನಡಕ್ಕೆ ದೊಡ್ಡ ಕೊಡುಗೆ ಕೊಟ್ಟವರು ಅವರು. ಅಪ್ಪಟ ಕನ್ನಡತಿಯಾಗಿ ಮಾದರಿಯಾಗಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಠ'' ಎಂದು ಹಳೇ ದಿನಗಳನ್ನು ನೆನಪಿಸಿಕೊಂಡರು.
ಇದನ್ನೂ ಓದಿ: 'ಈಗ ಬಂದಾಳೆಂದು, ಮರಳಿ ಜೀವ ತಂದಾಳೆಂದು ಕಾದಿರುವೆ': ಪತಿ ನಾಗರಾಜ್ ಹೃದಯಸ್ಪರ್ಶಿ ಬರಹ - Aparna Husband Nagaraj Post
ಹಿರಿಯ ನಟಿ ತಾರಾ ಅನುರಾಧ ಮಾತನಾಡಿ, ''ಅಪರ್ಣಾ ವಿಧಿವಶ ಒಂದು ಶಾಕಿಂಗ್ ನ್ಯೂಸ್. ಅವರ ಆರೋಗ್ಯ ಸರಿ ಇರಲಿಲ್ಲ ಅನ್ನೋದೇ ನಮಗೆ ಗೊತ್ತಿರಲಿಲ್ಲ. ಅವರನ್ನು ಮೊದಲ ಸಲ ನೋಡಿದ್ದು ದೂರದರ್ಶನದಲ್ಲಿ. ಅವರು ಅದಾಗಲೇ ಸಿನಿಮಾದಲ್ಲಿ ನಟಿಸಿದ್ದರು. ಅವರು ನ್ಯೂಸ್ ಓದಬೇಕಾದರೆ ಬೆರಗುಗಣ್ಣಿನಿಂದ ನೋಡಿದ್ದೇವೆ. ಮಜಾ ಟಾಕೀಸ್ ಸೇರಿದಂತೆ ಹಲವರು ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ. ಎಲ್ಲೇ ಸಿಕ್ಕರೂ ನಗುಮುಖದಿಂದ ಮಾತನಾಡುತ್ತಿದ್ದರು. ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ'' ಎಂದು ತಿಳಿಸಿದರು.
ಹಿರಿಯ ನಟ ಶ್ರೀನಾಥ್ ಮಾತನಾಡಿ, ''ಅಪರ್ಣಾ ನನ್ನ ಮಗಳು. ನಮಗೆ ಆಯಸ್ಸು ಜಾಸ್ತಿ ಆದಷ್ಟು ಜಾಸ್ತಿ ಸಾವನ್ನು ನೋಡುತ್ತಿದ್ದೇವೆ. ಮಕ್ಕಳ ಸಾವು ನೋಡುತ್ತಿದ್ದೇವೆ. ಅಪರ್ಣಾ ತಂದೆ ನಾರಾಯಣ ಸ್ವಾಮಿ ದೊಡ್ಡ ಪತ್ರಕರ್ತರು. ಅವರ ತಂದೆ ನಮ್ಮೆಲ್ಲರ ಬದುಕು ರೂಪಿಸಿದ ಶಿಲ್ಪಿ.ಅಪರ್ಣಾ ಅವರದ್ದು ಶುದ್ಧ ಕನ್ನಡ. ಅವರ ಭಾಷಾ ಪಾಂಡಿತ್ಯ ಮೆಚ್ಚಬೇಕಾಗಿದ್ದು. ಜೀವನದಲ್ಲಿ ತುಂಬಾ ನೋವು ಕಂಡಿದ್ದ ಅಪರ್ಣಾ ಅದೆಲ್ಲವನ್ನೂ ಮೆಟ್ಟಿ ನಿಂತವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ತಿಳಿಸಿದರು.
ಇದನ್ನೂ ಓದಿ: 'ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ': ಅನುಶ್ರೀ ಕಂಬನಿ - Anushree
ಹಿರಿಯ ನಟ ದತ್ತಣ್ಣ ಮಾತನಾಡಿ, ''ನಮ್ಮ ಗುಂಪಿನ ಜೊತೆ ಇರುತ್ತಿದ್ದರು. ಬಹಳ ಬೇಜಾರಾಗುತ್ತಿದೆ. ಕಾಯಿಲೆ ಅವರಿಗೂ ಗೊತ್ತಿತ್ತು. ನಗು ನಗುತ್ತಾ ಇದನ್ನು ಸ್ವೀಕರಿಸಿದ್ದಾರೆ'' ಎಂದು ತಿಳಿಸಿದರು.
ಹಿರಿನ ನಟ ಸುಂದರ್ ರಾಜ್ ಮಾತನಾಡಿ, "ಅನೇಕ ದುಃಖಕರ ವಿಷಯಗಳು ನಡೆಯುತ್ತಿವೆ. ಹಿಂದೆ ಸಾವು 80ರ ನಂತರ ಬರುತ್ತಿತ್ತು. ಆದ್ರೀಗ ನಮ್ಮ ವಯಸ್ಸಿನವರಲ್ಲ, ನಮಗಿಂತ ಸಣ್ಣ ವಯಸ್ಸಿನವರು ಹೋಗುತ್ತಿದ್ದಾರೆ. ಅಪ್ಪಟ ಕನ್ನಡತಿ ಅಪರ್ಣಾ ಎಲ್ಲೂ ಆರ್ಭಟ ಇಲ್ಲದೇ ನಿರೂಪಣೆ ಮಾಡುತ್ತಿದ್ರು. ಕನ್ನಡಕ್ಕೆ ಮಾದರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತಿಳಿಸಿದರು.