ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿರುವ ಜನಪ್ರಿಯ ಕಿರುತೆರೆ ಕಾರ್ಯಕ್ರಮ ''ಬಿಗ್ ಬಾಸ್ ಕನ್ನಡ ಸೀಸನ್ 11''ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ಸೀಸನ್ 10ರ ಬಹುದೊಡ್ಡ ಯಶಸ್ಸಿನ ಬಳಿಕ ದೊಡ್ಡ ಜವಾಬ್ದಾರಿಯೊಂದಿಗೆ ಕಲರ್ಸ್ ಕನ್ನಡ ಮತ್ತೊಂದು ಸೀಸನ್ ಜೊತೆಗೆ ಆಗಮಿಸುತ್ತಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ಗಮನ ಸೆಳೆದಿರುವ ಸೀಸನ್ 11, ಇನ್ನೇನು ನಾಲ್ಕು ದಿನಗಳಲ್ಲಿ ಆರಂಭವಾಗಲಿದೆ.
ಬಿಗ್ ಬಾಸ್ ತಂಡ ಇಂದು ಮತ್ತೊಂದು ವಿಡಿಯೋ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಪ್ರೊಮೋದಲ್ಲಿ ಸಂಪೂರ್ಣ ಬಿಳಿ ಉಡುಗೆಯೊಂದಿಗೆ ಆಗಮಿಸಿದ ಅಭಿನಯ ಚಕ್ರವರ್ತಿ ಸುದೀಪ್, ''ಇದು ಬಿಗ್ ಬಾಸ್ನ ಹೊಸ ಅಧ್ಯಾಯ. ಸ್ವರ್ಗ ನರಕ ಎರಡೂ ಇದೆ. ಎರಡ್ರಲ್ಲೂ ಕಿಚ್ಚು ಅಷ್ಟೇ ಇದೆ'' ಎಂಬ ಆಕರ್ಷಕ ಡೈಲಾಗ್ ಹೊಡೆದಿದ್ದಾರೆ. ಪೋಸ್ಟ್ಗೆ, ''ಬಿಗ್ ಬಾಸ್ ಹೊಸ ಅಧ್ಯಾಯ ಶುರು, ಇನ್ನು 4 ದಿನಗಳಲ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 11. ಗ್ರ್ಯಾಂಡ್ ಓಪನಿಂಗ್ ಭಾನುವಾರ ಸಂಜೆ 6, ಪ್ರತಿರಾತ್ರಿ 9:30ಕ್ಕೆ'' ಎಂಬ ಕ್ಯಾಪ್ಷನ್ ಕೊಡಲಾಗಿದೆ.
ಇಂದಿನ ಮತ್ತು ಈಗಾಗಲೇ ಅನಾವರಣಗೊಂಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ. ಕಿಚ್ಚನ ಎಂಟ್ರಿಗೆ ಸಿಳ್ಳೆ ಚಪ್ಪಾಳೆಗಳು ಸಿಗುತ್ತಿವೆ. ಬಿಗ್ ಬಾಸ್ ನೋಡುವ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಅಷ್ಟಕ್ಕೂ ಇದು ಅತಿ ಹೆಚ್ಚು ವೀಕ್ಷಕರನ್ನು ಸಂಪಾದಿಸಿರುವ ಜನಪ್ರಿಯ ಕನ್ನಡ ಕಾರ್ಯಕ್ರಮವಲ್ಲವೇ?.
ಈ ಬಾರಿಯ ಬಿಗ್ ಬಾಸ್ ''ಸ್ವರ್ಗ ಮತ್ತು ನರಕ'' ಎಂಬ ಹೊಸ ಕಾನ್ಸೆಪ್ಟ್ ಮೂಲಕ ಆಗಮಿಸುತ್ತಿದೆ. ಹೆಲ್ ಹೆವೆನ್ ಪರಿಕಲ್ಪನೆ ಇರಲಿದೆ. ಭಾನುವಾರ ಶೋ ಲಾಂಚ್ ಆಗಲಿದೆ. ಆದ್ರೆ, ಅದಕ್ಕೂ ಮೊದಲೇ ಶನಿವಾರವೇ "ರಾಜಾ ರಾಣಿ" ರಿಯಾಲಿಟಿ ಶೋನ ಫಿನಾಲೆಯಲ್ಲಿ ಬಿಗ್ ಬಾಸ್ ಸೀಸನ್ 11ರ ಆಯ್ದ ಕೆಲವರನ್ನು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಮಾರನೇ ದಿನದ ಗ್ರ್ಯಾಂಡ್ ಓಪನಿಂಗ್ ಇರಲಿದೆ.
ರಾಜಾ ರಾಣಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 11ರ ಆಯ್ದ ಕೆಲವರನ್ನು ತಂಡ ವೀಕ್ಷಕರಿಗೆ ಪರಿಚಯಿಸಲಿದೆ. ರಿವೀಲ್ ಮಾಡಿದ ಹೆಸರುಗಳಲ್ಲಿ, ಯಾರು ಬಿಗ್ ಬಾಸ್ ಮನೆ ಪ್ರವೇಶಿಸಬೇಕು? ಯಾರು ಬೇಡ? ಎಂಬುದನ್ನು ವೀಕ್ಷಕರೇ ವೋಟಿಂಗ್ ಮೂಲಕ ನಿರ್ಧರಿಸುವ ಅವಕಾಶ ನೀಡಲಿದ್ದಾರೆ. ಅಲ್ಲಿ ಪಾಸ್ ಆದವರು, ಮರು ದಿನದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಎಂಟ್ರಿಯಾಗಲಿದ್ದಾರೆ.
ಬಿಗ್ ಬಾಸ್ ಹೊಸ ಅಧ್ಯಾಯಕ್ಕೆ ಅದ್ಧೂರಿ ವೇದಿಕೆ ಸಜ್ಜಾಗಿದೆ. ಈ ಬಾರಿಯ ಶೋ ಅನ್ನೂ ಕೂಡಾ ಕಿಚ್ಚ ಸುದೀಪ್ ಹೋಸ್ಟ್ ಮಾಡಲಿರುವುದು ಈಗಾಗಲೇ ಅಧಿಕೃತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಲ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಲ್ಲ ಎಂಬ ಸುದ್ದಿ ಇತ್ತು. ಆದ್ರೆ, ಅದೆಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದೆ ವಾಹಿನಿ.
ಇದನ್ನೂ ಓದಿ: ಶಿವಣ್ಣ, ಉಪ್ಪಿ, ರಾಜ್ ಶೆಟ್ರ '45' ಸಿನಿಮಾಗೆ ಸಿಕ್ತು ಆನಂದಪೀಠಾಧೀಶ್ವರ ಆಚಾರ್ಯ ಅಭಯಹಸ್ತ - Multi Starrer 45 Movie
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, 10 ವರ್ಷಗಳಿಂದ ನಾನೇ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಈ ಬಾರಿ ನಾನು ಬೇಡ ಅಂದಿದ್ದು ನಿಜ. ಆದರೆ ಇದು ಗಿಮಿಕ್ ಅಲ್ಲ. ನಾನು ಈ ಬಾರಿ ನಿರೂಪಣೆ ಮಾಡದಿರಲು ಕೆಲವು ಕಾರಣಗಳನ್ನು ವಾಹಿನಿಯವರಿಗೆ ಹೇಳಿದ್ದೆ. ಇದರಲ್ಲಿ ಸಂಭಾವನೆ ವಿಷಯವಾಗಲಿ, ಮನಸ್ತಾಪವಾಗಲಿ ಯಾವುದೂ ಇಲ್ಲ. ಆದರೆ ಅವರು ನನ್ನನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಸ್ವರ್ಗ - ನರಕ ಹೊಸ ಕಾನ್ಸೆಪ್ಟ್ನೊಂದಿಗೆ ಈ ಸೀಸನ್ ಬರುತ್ತಿದೆ. ಇದೇ ಮೊದಲ ಬಾರಿಗೆ ಶೋ ಆರಂಭದ ಹಿಂದಿನ ದಿನವೇ ಕೆಲ ಅಭ್ಯರ್ಥಿಗಳು ಯಾರೆಂಬುದು ತಿಳಿಯಲಿದೆ. ಒಟ್ಟಾರೆ, ಕಳೆದ ಸೀಸನ್‌ಗಿಂತ ಈ ಸೀಸನ್ ಇನ್ನೂ ವಿಶೇಷವಾಗಿರಲಿದೆ ಎಂದು ಹೇಳಿದರು.