ಸ್ಯಾಂಡಲ್ವುಡ್ನಲ್ಲಿ ಉತ್ತಮ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಖದರ್ ತೋರಿಸಿರುವ ಬಹುಬೇಡಿಕೆ ನಟ ರಿಷಿ. 'ಕವಲುದಾರಿ' ಚಿತ್ರದ ಬಳಿಕ ರಿಷಿ ಮತ್ತೆ ಖಾಕಿ ತೊಟ್ಟು ಅಭಿಮಾನಿಗಳೆದುರು ಬರಲು ಸಜ್ಜಾಗಿರುವ ಬಹುನಿರೀಕ್ಷಿತ ಚಿತ್ರ 'ರುದ್ರ ಗರುಡ ಪುರಾಣ'. ಸದ್ಯ ಟೀಸರ್ ಹಾಗೂ ಪೋಸ್ಟರ್ನಿಂದ ಗಮನ ಸೆಳೆಯುತ್ತಿರುವ ಈ ಚಿತ್ರದ "ಕಣ್ಣ ಮುಂದೆ ಬಂದು" ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಈವೆಂಟ್ನಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಯಿತು.
ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ಅವರು 'ರುದ್ರ ಗರುಡ ಪುರಾಣ'ದ ಬಿಡುಗಡೆ ದಿನಾಂಕವನ್ನು ತಿಳಿಸಿದರೆ, ಮತ್ತೋರ್ವ ಹಿರಿಯ ನಟ ಕೆ.ಎಸ್.ಶ್ರೀಧರ್ "ಕಣ್ಣ ಮುಂದೆ ಬಂದು" ಹಾಡನ್ನು ಅನಾವರಣಗೊಳಿಸಿದರು. ತಾವು ಕೂಡಾ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಾಡಿನ ಪೋಸ್ಟರ್ ಹಂಚಿಕೊಂಡಿರುವ ನಾಯಕ ನಟ ರಿಷಿ, ''ರುದ್ರನ ಕಣ್ಮುಂದೆ ಬಂದ ಪ್ರೀತಿಯ ಸೆಲೆ ಈಗ ನಿಮ್ಮ ಮುಂದೆ. ಪ್ರೀತಿಯಿರಲಿ. ರುದ್ರ ಗರುಡ ಪುರಾಣ ಡಿಸೆಂಬರ್ 27, 2024ರಂದು ಚಿತ್ರಮಂದಿರಗಳಲ್ಲಿ'' ಎಂದು ಬರೆದುಕೊಂಡಿದ್ದಾರೆ
ಪುನೀತ್ ರಾಜ್ಕುಮಾರ್ ಸ್ಮರಣೆಯೊಂದಿಗೆ ಮಾತು ಆರಂಭಿಸಿದ ನಟ: ದಿ. ನಟ ಪುನೀತ್ ರಾಜ್ಕುಮಾರ್ ಸ್ಮರಣೆಯೊಂದಿಗೆ ಮಾತು ಆರಂಭಿಸಿದ ನಟ ರಿಷಿ, ಒಂದು ಚಿತ್ರ ಉತ್ತಮವಾಗಿ ಮೂಡಿ ಬರುವಲ್ಲಿ ಇಬ್ಬರು ಪ್ರಮುಖರು. ಅದು ನಿರ್ಮಾಪಕ ಹಾಗೂ ನಿರ್ದೇಶಕ. ನಮ್ಮ ಚಿತ್ರದ ನಿರ್ದೇಶಕರಾದ ನಂದೀಶ್ ಉತ್ತಮ ಕಥೆ ಮಾಡಿಕೊಂಡಿದ್ದರು. ಅವರ ಕಥೆಯನ್ನು ತೆರೆ ಮೇಲೆ ಯಾವುದೇ ಕೊರತೆ ಇಲ್ಲದ ಹಾಗೇ ತರಲು ನಿರ್ಮಾಪಕ ಲೋಹಿತ್ ಅವರು ಸಹಕಾರ ನೀಡಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ಬಹಳ ಸಖತ್ತಾಗಿದೆ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇಂದು ಬಿಡುಗಡೆ ಆಗಿರುವ "ಕಣ್ಣ ಮುಂದೆ ಬಂದು" ಹಾಡು ಎಲ್ಲರ ಹೃದಯಕ್ಕೆ ಹತ್ತಿರವಾಗಲಿದೆ. ಚಿತ್ರ ಕೂಡ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ನಂದೀಶ್ ಮಾತನಾಡಿ, ಸಿನಿಮಾ ಎಲ್ಲರಿಗೂ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ರಿಷಿ ಜೊತೆಗೆ ಅಶ್ವಿನಿ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಾಮ್ ಪವನ್, ನಂದ, ವಂಶಿ ಸೇರಿದಂತೆ ಕೆಲವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: 'ಪ್ಯಾನ್ ಇಂಡಿಯಾ ಕಾನ್ಸೆಪ್ಟ್ಗೆ ಕೆಜಿಎಫ್, ಕಾಂತಾರ ಕೊಡುಗೆ ಅಪಾರ': ಸೂಪರ್ಸ್ಟಾರ್ ಸೂರ್ಯ
ಹೆಸರಾಂತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಬಳಿ ಕಾರ್ಯ ನಿರ್ವಹಿಸಿರುವ ಕೆ.ಪಿ (ಕೃಷ್ಣಪ್ರಸಾದ್) ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಈಗ ಬಿಡುಗಡೆಯಾಗಿರುವ ಹಾಡು ಹಾಗೂ ಹಾಡಿದವರ ಬಗ್ಗೆ ಕೆ.ಪಿ ಮಾಹಿತಿ ನೀಡಿದರು. ದೇವಿ ಶ್ರೀ ಪ್ರಸಾದ್ ಅವರು ವಿಡಿಯೋ ಮೂಲಕ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಡಿಸೆಂಬರ್ 27 ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಬಿಗ್ ಬಾಸ್ ನನ್ನಮ್ಮನ ಅಚ್ಚುಮೆಚ್ಚಿನ ಕಾರ್ಯಕ್ರಮ': ಸುದೀಪ್ ಭಾವುಕ, ಧೈರ್ಯ ತುಂಬಿದ ಸರ್ವರಿಗೂ ಧನ್ಯವಾದ