ಸೌತ್ ಸಿನಿಮಾ ಇಂಡಸ್ಟ್ರಿಯ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಲ್ಕಿ ಎಡಿ 2898'. ಸ್ಟಾರ್ ಡೈರೆಕ್ಟರ್ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರತಂಡ ಪ್ರಚಾರದಲ್ಲಿ ಮಗ್ನವಾಗಿದೆ. ಈಗಾಗಲೇ ಅದ್ಧೂರಿ ಈವೆಂಟ್ ಕೂಡ ನಡೆದಿದೆ. ಚಿತ್ರಕ್ಕಾಗಿ ವಿನ್ಯಾಸಗೊಳಿಸಲಾದ ಬಜ್ಜಿ (ಕಾರು) ದೇಶದಾದ್ಯಂತ ಅನೇಕ ನಗರಗಳಲ್ಲಿ ರೌಂಡ್ಸ್ ಹಾಕುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಮೊದಲ ಟ್ರೇಲರ್‌ಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.
ಈ ಮಧ್ಯೆ, ಚಿತ್ರದ ಮತ್ತೊಂದು ಟ್ರೇಲರ್ ಅನಾವರಣಗೊಳಿಸಲು ನಿರ್ಮಾಪಕರು ಯೋಜಿಸಿದ್ದಾರೆ. ಎರಡನೇ ಟ್ರೇಲರ್ ಜೂನ್ 23ರಂದು ಬಿಡುಗಡೆಯಾಗಲಿದೆ. ಆದಾಗ್ಯೂ, ಚಿತ್ರ ತಯಾರಕರಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಪ್ಯಾನ್ ಇಂಡಿಯಾ ಸ್ಟಾರ್ನ ಕೊನೆಯ ಸೂಪರ್ ಹಿಟ್ ಸಿನಿಮಾ 'ಸಲಾರ್' ಚಿತ್ರದಿಂದ ಎರಡು ಟ್ರೇಲರ್ ರಿಲೀಸ್ ಆಗಿರುವುದರಿಂದ 'ಕಲ್ಕಿ'ಯಿಂದಲೂ ಎರಡನೇ ಟ್ರೇಲರ್ ಬಿಡುಗಡೆಯಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದೇ ಜೂನ್ 27ರಂದು 'ಕಲ್ಕಿ ಎಡಿ 2898' ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.
ಐದು ದಿನಗಳ ಹಿಂದೆ, ಜೂನ್ 10ರಂದು 'ಕಲ್ಕಿ 2898 ಎಡಿ'ಯ ಮೊದಲ ಟ್ರೇಲರ್ ಅನಾವರಣಗೊಂಡಿತ್ತು. ಅದ್ಭುತ ದೃಶ್ಯಗಳನ್ನು ಒಳಗೊಂಡ ಟ್ರೇಲರ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಟ್ರೇಲರ್ ಬಿಡುಗಡೆಯಾಗಿ 24 ಗಂಟೆಯೊಳಗೆ 13 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಾಣೋ ಮೂಲಕ ಗೆಲ್ಲುವ ಭರವಸೆ ಮೂಡಿಸಿದೆ. ಮರುದಿನ ಅಭಿಮಾನಿಗಳ, ಸಿನಿಪ್ರಿಯರ ಕುತೂಹಲ ಹೆಚ್ಚಿಸುವ ಸಲುವಾಗಿ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿ ತಂಡ ಮಾಹಿತಿ ಹಂಚಿಕೊಂಡಿತ್ತು.
ಇದನ್ನೂ ಓದಿ: 'ಕಲ್ಕಿ 2898 ಎಡಿ' ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್ ವೀಕ್ಷಣೆ; ಹೊಸ ಪೋಸ್ಟರ್ ರಿಲೀಸ್ - Klaki 2898 AD
ನಾಗ್ ಅಶ್ವಿನ್ ನಿರ್ದೇಶನಾ ಶೈಲಿ ಈಗಾಗಲೇ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಬಾಲಿವುಡ್ ಬಹುಬೇಡಿಕೆ ತಾರೆಯರಾದ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವೈಜಯಂತಿ ಮೂವೀಸ್ ನಿರ್ಮಿಸಿರುವ ಈ 'ಕಲ್ಕಿ ಎಡಿ 2898' ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ಸೈನ್ಸ್ ಫಿಕ್ಷನ್. ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆ ಕೊಟ್ಟಿರುವ ಈ ಚಿತ್ರವನ್ನು 600 ಕೋಟಿ ರೂ.ನಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ವರದಿಗಳಿವೆ. ಅದು ನಿಜವಾದರೆ ಭಾರತೀಯ ಚಿತ್ರರಂಗದಲ್ಲೇ ಇದು ಬಿಗ್ ಬಜೆಟ್ ಚಿತ್ರವಾಗಲಿದೆ. ಇದೇ ಜೂನ್ 27ರಂದು ಸಿನಿಮಾ ತೆರೆಗಪ್ಪಳಿಸಲಿದ್ದು, ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕೋಟಿ ಬಾಚಿಕೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್-ಅಟ್ಲೀ ಕಾಂಬೋದ ಸಿನಿಮಾ ಸ್ಥಗಿತ: ಕಾರಣ? - Atlee Allu Arjun Movie