ಹೈದರಾಬಾದ್(ತೆಲಂಗಾಣ): ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಸಿನಿಮಾ ಬಿಡುಗಡೆಗೆ ಇನ್ನು ಮೂರೇ ದಿನ ಬಾಕಿ. ತೆಲಂಗಾಣದ ಸೇರಿದಂತೆ ವಿಶ್ವಾದ್ಯಂತ ನಟ ಪ್ರಭಾಸ್ ಅಭಿಮಾನಿಗಳ ಕುತೂಹಲ, ನಿರೀಕ್ಷೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದೇ ವೇಳೆ, ಟಿಕೆಟ್ ದರದಲ್ಲಿ ವಿಶೇಷವಾಗಿ 200 ರೂಪಾಯಿ (ಜಿಎಸ್‌ಟಿ ಸೇರಿ) ಹೆಚ್ಚಿಸಲಾಗಿದೆ. ಈ ಕುರಿತ ಚಿತ್ರ ನಿರ್ಮಾಪಕರ ಮನವಿಗೆ ತೆಲಂಗಾಣ ಸರ್ಕಾರ ಒಪ್ಪಿಗೆ ನೀಡಿದೆ.
ಜುಲೈ 27ರ ಬೆಳಗ್ಗೆ 5:30ಕ್ಕೆ ವಿಶೇಷ ಪ್ರದರ್ಶನ (ಆರನೇ ಶೋ) ಏರ್ಪಡಿಸಲಾಗಿದೆ. ಜೂನ್ 27ರಿಂದ ಒಟ್ಟು ಎಂಟು ದಿನಗಳವರೆಗೆ ಥಿಯೇಟರ್‌ಗಳಲ್ಲಿ ಐದು ಶೋಗಳನ್ನು ನಡೆಸಲು ಸರ್ಕಾರ ಅನುಮತಿಸಿದೆ.
ಜೂನ್ 27ರಂದು ವಿಶ್ವಾದ್ಯಂತ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಟಿಕೆಟ್ ದರಗಳು ಹೀಗಿವೆ: ಸಿಂಗಲ್ ಸ್ಕ್ರೀನ್ ಥಿಯೇಟರ್ನಲ್ಲಿ ₹75 ಮತ್ತು ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ₹100 ಏರಿಸಲಾಗಿದೆ. ಪರಿಷ್ಕೃತ ಟಿಕೆಟ್ ದರಗಳು ಈ ಕೆಳಗಿನಂತಿವೆ.
ಮಲ್ಟಿಪ್ಲೆಕ್ಸ್ ಥಿಯೇಟರ್ - ₹413
ಸಿಂಗಲ್ ಸ್ಕ್ರೀನ್ - ₹265
ಆದರೆ, ಗಮನಿಸಿ: ಸಿನಿಮಾ ತೆರೆಕಾಣುವ ದಿನ, ಆರನೇ ಪ್ರದರ್ಶನದ (ಸ್ಪೆಷಲ್ ಶೋ) ಟಿಕೆಟ್‌ಗಳ ಬೆಲೆ ಮಲ್ಟಿಪ್ಲೆಕ್ಸ್‌ಗಳಲ್ಲಿ ₹495 ಮತ್ತು ಸಿಂಗಲ್ ಸ್ಕ್ರೀನ್‌ಗಳಲ್ಲಿ ₹377 ಇರಲಿದೆ. ಈ ಟಿಕೆಟ್ ದರದಲ್ಲಿ ಪ್ರಭಾಸ್ ಅಭಿನಯದ ಈ ಚಿತ್ರ ಟಾಲಿವುಡ್ ಇತಿಹಾಸದಲ್ಲೇ ಹಿಂದಿನ ದಾಖಲೆಗಳನ್ನು ಮುರಿಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸೋನಾಕ್ಷಿ-ಜಹೀರ್ ಮದುವೆ: ಧಾರ್ಮಿಕ ಕಾರ್ಯಕ್ರಮಗಳ ವಿಡಿಯೋ ವೈರಲ್ - Sonakshi Zaheer Wedding
ಇತ್ತೀಚೆಗೆ, ಮುಂಬೈನಲ್ಲಿ ಸಿನಿಮಾ ಪ್ರಚಾರ ಸಲುವಾಗಿ ನಡೆದ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಭಾಗವಹಿಸಿದ್ದರು. ಈವೆಂಟ್‌ನಲ್ಲಿ, ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವನ್ನು ಬಿಗ್ ಬಿ ತೆರೆದಿಟ್ಟರು. 'ಕಲ್ಕಿ 2898 ಎಡಿ'ಯಂತಹ ಅದ್ಭುತ ಕಲ್ಪನೆಯನ್ನು ಹುಟ್ಟುಹಾಕಿದ ನಿರ್ದೇಶಕ ನಾಗ್ ಅಶ್ವಿನ್ ಪ್ರತಿಭೆಯನ್ನು ಅವರು ಕೊಂಡಾಡಿದರು. ನಟಿ ದಿಶಾ ಪಟಾನಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.