ಹೈದರಾಬಾದ್: ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸೇರಿದಂತೆ ಬಹುತಾರಾಗಣದಲ್ಲಿ ಅದ್ಧೂರಿಯಾಗಿ ತೆರೆಕಂಡ 'ಕಲ್ಕಿ 2898 AD' ಚಿತ್ರ ಪ್ರದರ್ಶನ ಯಶಸ್ವಿ 25ನೇ ದಿನಕ್ಕೆ ಕಾಲಿಟ್ಟಿದೆ. ತೆರೆ ಕಂಡು ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವ 'ಕಲ್ಕಿ' ಕಳೆದ ವಾರಾಂತ್ಯಕ್ಕೆ ಬಾಕ್ಸ್ ಆಫೀಸ್ ಸಂಗ್ರಹಣೆಯಲ್ಲಿ ಏರಿಕೆ ಕಾಣುವ ಮೂಲಕ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರವು ಶನಿವಾರ 6.1 ಕೋಟಿ ಗಳಿಸಿದರೆ, ಭಾನುವಾರ 8.25 ಕೋಟಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟು ದೇಶೀಯ ಕಲೆಕ್ಷನ್ 616.70 ಕೋಟಿ ರೂ.ಗೆ ತಲುಪಿತು. ಹಿಂದಿ ಆವೃತ್ತಿಯಲ್ಲಿ 275.9 ಕೋಟಿ ರೂಪಾಯಿ (ನಾಲ್ಕು ವಾರ) ಗಳಿಸುವ ಮೂಲಕ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಚಿತ್ರವಾಗಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ನಟನೆಯ 'ಆರ್ಆರ್ಆರ್' ಚಿತ್ರವು 272 ಕೋಟಿ ರೂ. ಗಳಿಸಿತ್ತು. ಆ ದಾಖಲೆಯನ್ನು 'ಕಲ್ಕಿ' ಮುರಿದಿದೆ ಎಂದು ಸ್ಯಾಕ್ನಿಲ್ಕ್ ಹೇಳಿಕೊಂಡಿದೆ.
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ 'ಸರ್ಫಿರಾ' ಮತ್ತು ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ನಟನೆಯ 'ಬ್ಯಾಡ್ ನ್ಯೂಜ್'ನಂತಹ ಬಾಲಿವುಡ್ ಚಿತ್ರಗಳ ಬಿಡುಗಡೆ ಹೊರತು ಸಹ 'ಕಲ್ಕಿ 2898 AD'ಯ ಹಿಂದಿ ಆವೃತ್ತಿಯು ಮುನ್ನುಗ್ಗುತ್ತಿದೆ. ಕಮಲ್ ಹಾಸನ್ ಅವರ ಇಂಡಿಯನ್ - ಚಿತ್ರ 2 ಕೂಡ ಬಿಡುಗಡೆಯಾಗಿದ್ದು ಇವುಗಳ ಮಧ್ಯೆ ಬುಜ್ಜಿ ಮ್ಯಾಜಿಕ್ ಯಶಸ್ವಿ 25 ದಿನಕ್ಕೆ ಕಾಲಿಟ್ಟಿದೆ. ಸದ್ಯ 616.70 ಕೋಟಿ ರೂ.ಗೆ ತಲುಪಿರುವ ಚಿತ್ರದ ಗಳಿಕೆ ಮುಂದಿನ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೇ 650 ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದು ಸಿನಿ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹೀಗೆ ಮುಂದುವರೆದಿದ್ದೇ ಆದಲ್ಲಿ ಭಾರತದಲ್ಲಿ 640.25 ಕೋಟಿ ರೂ. ಗಳಿಸಿದ ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರವನ್ನು ಮೀರಿಸುವ ಸಾಧ್ಯತೆಯಿದೆ. 'ಜವಾನ್' 2023ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಅಲ್ಲದೇ ಸಾರ್ವಕಾಲಿಕ 5ನೇ ಅತಿ ಹೆಚ್ಚು ಗಳಿಕೆಯ ಚಿತ್ರ ಕೂಡ ಹೌದು.
ಇನ್ನು ಜಾಗತಿಕವಾಗಿ 1000 ಕೋಟಿ ರೂಪಾಯಿಗಳ ಗಡಿ ದಾಟಿರುವ 'ಕಲ್ಕಿ 2898 AD', ವಿಶ್ವದಾದ್ಯಂತ ಏಳನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ದಾಖಲೆ ಬರೆದಿದೆ ಎಂದು ಹೇಳಲಾಗುತ್ತಿದೆ.
ನಾಗ್ ಅಶ್ವಿನ್ ನಿರ್ದೇಶಿಸಿದ 'ಕಲ್ಕಿ 2898 AD' ಚಿತ್ರ ಒಂದು ಸೈನ್ಸ್ ಫಿಕ್ಸನ್ ಸಿನಿಮಾವಾಗಿದೆ. ನಟ ಪ್ರಭಾಸ್ ಭೈರವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಅವರು ಅಶ್ವತ್ಥಾಮನ ಪಾತ್ರದಲ್ಲಿ, ಕಮಲ್ ಹಾಸನ್ ಯಾಸ್ಕಿನ್ ಪಾತ್ರದಲ್ಲಿ, ದೀಪಿಕಾ ಪಡುಕೋಣೆ ಸುಮತಿಯಾಗಿ ಕಾಣಿಸಿಕೊಂಡಿದ್ದಾರೆ. ದಿಶಾ ಪಟಾನಿ, ದುಲ್ಕರ್ ಸಲ್ಮಾನ್, ಅನ್ನಾ ಬೆನ್ ಮತ್ತು ಮೃಣಾಲ್ ಠಾಕೂರ್ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.