ನವದೆಹಲಿ : ಸಾಕ್ಷರತೆಯಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಈ ಮಾತು ಅಕ್ಷರಶಃ ಸತ್ಯ. ಇದಕ್ಕೆ ಸಾಕ್ಷಿ ಎಂಬಂತೆ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 1 ರಷ್ಟು ಹೆಚ್ಚಿದ್ದು, ಅದು ಚುನಾವಣೆಗಳಲ್ಲಿ ನಡೆಯುವ ಮತದಾನದಲ್ಲಿ ಭಾರೀ ಏರಿಕೆ ದಾಖಲಿಸಿದೆ.
ದೇಶದಲ್ಲಿ ವಿದ್ಯಾವಂತರು ಹೆಚ್ಚುತ್ತಿದ್ದಾರೆ. ಇದರಿಂದಾಗಿ ಮತದಾನದ ಪ್ರಮಾಣದಲ್ಲೂ ಭಾರಿ ಬದಲಾವಣೆ ಕಂಡಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ತಿಳಿದು ಬಂದಿದೆ. ಅದರಲ್ಲೂ ವಿಶೇಷವಾಗಿ, ಮಹಿಳೆಯರ ಮತದಾನದ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೇಶದಲ್ಲಿ ಕೇವಲ ಶೇಕಡಾ 1 ರಷ್ಟು ಸಾಕ್ಷರತೆಯ ಹೆಚ್ಚಳದ ಪರಿಣಾಮವಾಗಿ, ಚುನಾವಣೆಗಳಲ್ಲಿ ಮಹಿಳೆಯರ ಮತದಾನವು ಶೇಕಡಾ 25 ರಷ್ಟು ಏರಿದೆ ಎಂದು ವರದಿ ಬಹಿರಂಗಪಡಿಸಿದೆ. 2019 ರ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ 2024 ರ ಚುನಾವಣೆಯಲ್ಲಿ ಹೆಚ್ಚುವರಿ 1.8 ಕೋಟಿ ಮಹಿಳೆಯರು ಮತ ಚಲಾಯಿಸಿದ್ದಾರೆ. ಇದರಲ್ಲಿ ಸುಮಾರು 45 ಲಕ್ಷ ಮಹಿಳೆಯರು ಮತದಾನದ ಹಕ್ಕನ್ನು ಚಲಾಯಿಸಲು ಸಾಕ್ಷರತೆಯೇ ಪ್ರಮುಖ ಕಾರಣವಾಗಿದೆ. ಸಾಕ್ಷರತೆಯ ಜೊತೆಗೆ, ಉದ್ಯೋಗ ಅವಕಾಶ ಹೆಚ್ಚಳ, ಮನೆ-ಮಾಲೀಕತ್ವವೂ ಮಹಿಳೆಯರು ಮತದಾನ ಹೆಚ್ಚಾಗಿ ಪಾಲ್ಗೊಳ್ಳಲು ಪ್ರೇರೇಪಿಸಿದೆ ಎಂದು ವರದಿ ಹೇಳಿದೆ.
ಕೇಂದ್ರ ಸರ್ಕಾರದ ಯೋಜನೆಗಳ ಪರಿಣಾಮ: 'ಪ್ರಧಾನ ಮಂತ್ರಿ ಮುದ್ರಾ ಯೋಜನೆ' ಯೋಜನೆಯು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಕರ್ಷಿಸಿದೆ. ಇದರ ಪರಿಣಾಮವಾಗಿ 2024 ರ ಚುನಾವಣೆಯಲ್ಲಿ ಹೆಚ್ಚುವರಿ 36 ಲಕ್ಷ ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ನೈರ್ಮಲ್ಯ ನಿರ್ವಹಣೆಯ ವಿಷಯವೂ ಮಹಿಳೆಯರ ದೃಷ್ಟಿಯಲ್ಲಿ ಬಹಳ ಮುಖ್ಯವಾಗಿದೆ.
ವರದಿಯ ಪ್ರಕಾರ, ನೆರೆಹೊರೆಯಲ್ಲಿ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡುವ ಕಾರ್ಯಕ್ರಮಗಳ ಪ್ರಭಾವದಿಂದಾಗಿ 2024 ರ ಚುನಾವಣೆಯಲ್ಲಿ 21 ಲಕ್ಷ ಮಹಿಳೆಯರು ಹೊಸದಾಗಿ ಮತ ಚಲಾಯಿಸಿದ್ದಾರೆ. ಮತ ಚಲಾವಣೆ ವೇಳೆ ಮಹಿಳೆಯರು ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಸಹ ಪರಿಗಣಿಸಿದ್ದಾರೆ. ಅವುಗಳನ್ನು ಪಡೆಯುವ ಉದ್ದೇಶದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದಿದೆ.
ಆಕರ್ಷಿಸಿದ ಮನೆಯೊಡತಿ ಅವಕಾಶ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಿಸಿಕೊಡುವ ಮನೆಗಳಿಗೆ ಮಹಿಳೆಯರನ್ನೇ ಒಡತಿಯನ್ನಾಗಿಸಿದೆ. ಇದು 2024 ರ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರನ್ನು ಆಕರ್ಷಿಸಿದೆ. ಇದರಿಂದ 20 ಲಕ್ಷ ಹೆಚ್ಚುವರಿ ಮಹಿಳೆಯರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಸ್‌ಬಿಐ ಅಂದಾಜಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಶೇಕಡಾ 74 ರಷ್ಟು ಮನೆಗಳಿಗೆ ಮಹಿಳೆಯರು ಒಂಟಿಯಾಗಿ ಅಥವಾ ಅವರ ಪತಿಯೊಂದಿಗೆ ಜಂಟಿಯಾಗಿ ಒಡೆತನ ಹೊಂದಿದ್ದಾರೆ.
ಆದಾಗ್ಯೂ, ಮಹಿಳೆಯರ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡರೂ, ಪ್ರಭಾವಿ ವರ್ಗವಾಗಿ ರಾಜಕೀಯ ಪ್ರಾಧಾನ್ಯತೆ ಪಡೆದುಕೊಳ್ಳುವಲ್ಲಿ ಸಫಲವಾಗಿಲ್ಲ ಎಂದು ಎಸ್‌ಬಿಐ ವರದಿ ಹೇಳಿದೆ.
ಇದನ್ನೂ ಓದಿ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ 176 ವರ್ಷಗಳ ಇತಿಹಾಸದಲ್ಲೇ ಮೊದಲು! ಇಬ್ಬರಿಗೆ ಕಣ್ಣು, ಒಬ್ಬರಿಗೆ ಲಿವರ್ ದಾನ ನೀಡಿದ ಮಹಿಳೆ