ಹೈದರಾಬಾದ್: ನಟಿ ಕಾಜೋಲ್ ಮತ್ತು ಅಜಯ್ ದೇವಗನ್ಗೆ ಇಂದು ಸಂಭ್ರಮದ ದಿನ. ಕಾರಣ ಅವರ ಮುದ್ದು ಮಗಳು ನಿಸಾ ದೇವಗನ್ಗೆ ಇಂದು 21ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆ ನಟಿ ಕಾಜೋಲ್ ಮಗಳ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಕೋರಿದ್ದಾರೆ.
ಮಕ್ಕಳ ಹುಟ್ಟುಹಬ್ಬದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಶುಭ ಕೋರುವ ಸಂಪ್ರದಾಯವನ್ನು ನಟಿ ಕಾಜೋಲ್ ನಡೆಸಿಕೊಂಡು ಬಂದಿದ್ದಾರೆ. ಅದರಂತೆ ಏಪ್ರಿಲ್ 19ರಂದೇ ಕಾಜೋಲ್ ಏಪ್ರಿಲ್ 20ರಂದು ಹುಟ್ಟುಹಬ್ಬ ಆಚರಿಸುತ್ತಿರುವ ಮಗಳಿಗೆ ಪೂರ್ವದಲ್ಲಿ ಶುಭ ಕೋರಿದ್ದಾರೆ. ಈ ವೇಳೆ ಮಗಳ ಕೆಲವು ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಂತೆ ಮೂರು ಫೋಟೋ ಹಂಚಿಕೊಂಡಿದ್ದು, ಮೊದಲ ಚಿತ್ರದಲ್ಲಿ ಮನಸಾರೆ ನಗುತ್ತಾ ನೆಲದ ಮೇಲೆ ತಮ್ಮ ಮುದ್ದಿನ ನಾಯಿಗೆ ಮುದ್ದಿಸುತ್ತಿರುವ ಚಿತ್ರ ಕಾಣಬಹುದಾಗಿದೆ.
ಎರಡನೇ ಚಿತ್ರದಲ್ಲಿ ಬಂಗಾರದ ಬಣ್ಣದ ಲೆಹಾಂಗದಲ್ಲಿ ಅಲಂಕೃತಗೊಂಡು ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ ನಿಸಾ. ಮೂರನೇ ಚಿತ್ರದಲ್ಲಿ ಆಕೆ ಮುದ್ದಿನ ನಾಯಿ ಮರಿಯೊಂದಿಗೆ ಆಟವಾಡುತ್ತಿರುವ ಚಿತ್ರ ತೋರಿಸಲಾಗಿದೆ. ಈ ಚಿತ್ರಗಳಿಗೆ ಅಡಿಬರಹ ಬರೆದಿರುವ ತಾಯಿ ಕಾಜೋಲ್, 'ನಿನಗೆ ಗೊತ್ತು ನಾನು ನಿನ್ನನ್ನು ಕೊನೆವರೆಗೂ ಪ್ರೀತಿಸುತ್ತೇನೆ ಎಂದು. ಕಡೆಯ ಫೋಟೋದಲ್ಲಿರುವಂತೆ ನಾನು ನಿನ್ನನ್ನು ಬಹುತೇಕ ಕಂಡಿದ್ದೇನೆ' ಎಂದಿದ್ದಾರೆ.
ಇದಕ್ಕೂ ಒಂದು ದಿನದ ಮುಂಚೆ ಮತ್ತೊಂದು ಫೋಟೋ ಹಂಚಿಕೊಂಡಿರುವ ಕಾಜೋಲ್, ತಮ್ಮ ತಾಯ್ತನದ ಪ್ರಯಾಣದ ಕುರಿತು ಸುದೀರ್ಘವಾಗಿ ಬರೆದಿದ್ದು, ಆಕೆಯ ಮಕ್ಕಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಗಳು ನಿಸಾ ಬಾಲ್ಯದಲ್ಲಿ ಕಾಲ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದು, ಮಗಳನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ ಎಂಬುದಾಗಿ ತಿಳಿಸಿದ್ದಾರೆ.
ನಟ ಅಜಯ್ ದೇವಗನ್ ಜೊತೆಗೆ 1999ರಲ್ಲಿ ಸಪ್ತಪದಿ ತುಳಿದ ನಟಿ ಕಾಜೋಲ್ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಮಗಳು ನಿಸಾ ಮತ್ತು ಮಗ ಯುಗ್ ಕುರಿತ ಹಲವು ಅಪ್ಡೇಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ವೃತ್ತಿ ವಿಚಾರವಾಗಿ ಗಮನಿಸುವುದಾದರೆ ನಟಿ 'ಲಸ್ಟ್ ಸ್ಟೋರಿ 2' ಮತ್ತು 'ನೊಯೊನಿಕಾ ಸೆನ್ಗುಪ್ತಾ' ವೆಬ್ ಸಿರೀಸ್ನಲ್ಲಿ ಕಾಣಿಸುತ್ತಿದ್ದಾರೆ. 'ಶರ್ಸಮೀನ್', 'ದೊ ಪತ್ತಿ', 'ಮಾ ಇನ್ ಹರ್ ಕಿಟ್ಟಿ' ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ಕಚೇರಿಗಾಗಿ ಹೊಸ ಜಾಗ ಖರೀದಿಸಿದ ನಟಿ ಕಾಜೋಲ್ : ಆಸ್ತಿ ಮೌಲ್ಯ ಕೇಳಿದರೆ ಹುಬ್ಬೇರಿಸ್ತೀರಾ!