ಮುಂಬೈ (ಮಹಾರಾಷ್ಟ್ರ): ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ಭಾನುವಾರ ನಡೆದ ಉಗ್ರರ ದಾಳಿಯನ್ನು ಬಾಲಿವುಡ್ನ ಹಲವು ನಟ-ನಟಿಯರು ಖಂಡಿಸಿದ್ದಾರೆ. ಯಾತ್ರಾರ್ಥಿಗಳು ಇಲ್ಲಿನ ವೈಷ್ಣೋದೇವಿ ಕ್ಷೇತ್ರಕ್ಕೆ ತೆರಳುತ್ತಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ಆಳವಾದ ಕಂದಕಕ್ಕೆ ಬಿದ್ದಿದೆ. ದುರಂತದಲ್ಲಿ 10 ಮಂದಿ ಸಾವನ್ನಪ್ಪಿ 33ಕ್ಕೂ ಅಧಿಕ ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ.
ಬಾಲಿವುಡ್ ನಟಿ, ಬಿಜೆಪಿ ನೂತನ ಸಂಸದೆ ಕಂಗನಾ ರಣಾವತ್ ಅವರು ಭಯೋತ್ಪಾದಕ ದಾಳಿಯನ್ನು ಟೀಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಯಾತ್ರಿಕರ ಮೇಲೆ ನಡೆದ ದಾಳಿಯು ಹೇಡಿಗಳ ಕೃತ್ಯವಾಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದವರ ಮೇಲೆ ಹಿಂದೂ ಎಂಬ ಕಾರಣಕ್ಕೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಮೃತರ ಕುಟುಂಬಗಳಿಗೆ ಇದನ್ನು ಅರಗಿಸಿಕೊಳ್ಳುವ ಶಕ್ತಿ ಬರಲಿ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಓಂ ಶಾಂತಿ.. ಎಂದು ಬರೆದುಕೊಂಡಿದ್ದಾರೆ.
ನಟ ರಿತೇಶ್ ದೇಶಮುಖ್ ಅವರು, ದಾಳಿಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ರಿಯಾಸಿ ಭಯೋತ್ಪಾದಕ ದಾಳಿಯ ದೃಶ್ಯಗಳನ್ನು ನೋಡಿದ ನಂತರ ಭಯಭೀತನಾದೆ. ಆಘಾತಕ್ಕೊಳಗಾಗಿದ್ದೇನೆ. ಮೃತರು ಮತ್ತು ಗಾಯಾಳುಗಳಿಗಾಗಿ ಪ್ರಾರ್ಥಿಸಿ ಎಂದು ಕೋರಿದ್ದಾರೆ.
ಹಿರಿಯ ನಟ, 'ದಿ ಕಾಶ್ಮೀರ್ ಫೈಲ್ಸ್' ಖ್ಯಾತಿಯ ಅನುಪಮ್ ಖೇರ್ ಅವರು ದುರಂತವನ್ನು ಖಂಡಿಸಿ, ಯಾತ್ರಿಕರ ಮೇಲೆ ನಡೆದ ಹೇಡಿತನದ ದಾಳಿಯು ನನ್ನಲ್ಲಿ ಕೋಪ ತರಿಸಿದೆ. ತೀವ್ರ ದುಃಖಿತನಾಗಿದ್ದೇನೆ. ಮೃತರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ದಾಳಿಯ ಬಗ್ಗೆ ನಟ ವರುಣ್ ಧವನ್ ಆಘಾತ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಯಾತ್ರಾರ್ಥಿಗಳ ಮೇಲೆ ನಡೆದ ಭೀಕರ ದಾಳಿಯಿಂದ ಆಘಾತವಾಗಿದೆ. ಈ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಗಲಿದ ಆತ್ಮಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪೋಸ್ಟ್ ಮಾಡಿದ್ದಾರೆ.