ವಿಜಯವಾಡ (ಆಂಧ್ರಪ್ರದೇಶ): ಮುಂಬೈ ಮೂಲದ ನಟಿ ಕಾದಂಬರಿ ಜೇತ್ವಾನಿ ಅವರನ್ನು ಅಕ್ರಮವಾಗಿ ಬಂಧಿಸಿದ್ದು ಮತ್ತು ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ (ಅಮಾನತುಗೊಂಡಿದ್ದಾರೆ) ಅಧಿಕಾರಿಗಳಾದ ಆಂಜನೇಯುಲು, ಕಂಠೀರಣಾ ತಾತಾ ಮತ್ತು ವಿಶಾಲ್ ಗುನ್ನಿ ಅವರನ್ನು ಆರೋಪಿಗಳಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.
ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಬಗ್ಗೆ ರಾಜ್ಯ ಪೊಲೀಸ್ ಅಧಿಕಾರಿಗಳು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾನೂನು ಸಲಹೆ ಪಡೆದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ನಟಿಯ ದೂರಿನ ನಂತರ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಸೆಪ್ಟೆಂಬರ್ 13 ರಂದು ನಟಿ ಕಾದಂಬರಿ ಜೇತ್ವಾನಿ ಅವರು ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕುಕ್ಕಲ ವಿದ್ಯಾಸಾಗರ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿ ತನ್ನ ವಿರುದ್ಧದ ನಕಲಿ ದಾಖಲೆಗಳ ಆಧಾರದ ಮೇಲೆ ಸುಳ್ಳು ಪ್ರಕರಣವೊಂದರಲ್ಲಿ ನನ್ನನ್ನು ಬಂಧಿಸಿ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಅಧಿಕಾರಿಗಳು ತಮ್ಮ ಮನೆಯ ಬೀಗಗಳನ್ನು ಅಕ್ರಮವಾಗಿ ಮುರಿದಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದರು.
ಎಫ್‌ಐಆರ್‌ನಲ್ಲಿ ವಿದ್ಯಾಸಾಗರ್ ಅವರನ್ನು ಪ್ರಮುಖ ಆರೋಪಿ (ಎ1) ಎಂದು ಉಲ್ಲೇಖಿಸಲಾಗಿದೆ. ತನಿಖೆ ನಡೆದಿದ್ದು ಮೂವರು ಐಪಿಎಸ್ ಅಧಿಕಾರಿಗಳು ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ವಿಜಯವಾಡ ಕಮಿಷನರೇಟ್ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಜೊತೆಗೆ ಪ್ರಾಥಮಿಕ ತನಿಖೆಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಪುರಾವೆ ಸಿಕ್ಕಿದ್ದು, ಅವರನ್ನು ಆರೋಪಿಗಳನ್ನಾಗಿ ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ: ಕನ್ನಡ್ ಅಲ್ಲ ಕನ್ನಡ: ಮತ್ತೆ ಸಾಬೀತಾಯ್ತು ಕಿಚ್ಚನ ಭಾಷಾಪ್ರೇಮ; ಸುದೀಪ್ ವಿಡಿಯೋ ವೈರಲ್ - Sudeep
ಸದ್ಯ ಪ್ರಮುಖ ಆರೋಪಿ ವಿದ್ಯಾಸಾಗರ್ನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. "ಪಿತೂರಿಯ ವಿವರಗಳು ಸ್ಪಷ್ಟವಾಗಲಿವೆ ಎಂದು ನಾವು ಭಾವಿಸುತ್ತೇವೆ, ಜೊತೆಗೆ ಸುಳ್ಳು ಪ್ರಕರಣವನ್ನು ದಾಖಲಿಸಲು ಪ್ರಮುಖ ರೂವಾರಿಗಳು ಯಾರು ಎಂಬುದು ಶೀಘ್ರದಲ್ಲೇ ತಿಳಿಯಲಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾದಂಬರಿ ಜೇತ್ವಾನಿ ಕುಟುಂಬಕ್ಕೆ ರಾಜಕೀಯ ಮುಖಂಡನಿಂದ ಕಿರುಕುಳ: ಮಾಧ್ಯಮಗಳೆದುರು ಕಣ್ಣೀರಿಟ್ಟ ನಟಿ - Kadambari Jethwani
ಫೆಬ್ರವರಿಯಲ್ಲಿ ಕೆವಿಆರ್ ವಿದ್ಯಾಸಾಗರ್ ತಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಸುಲಿಗೆ ಪ್ರಕರಣದ ಆರೋಪ (forgery and extortion) ಹೊರಿಸಿದ್ದಾರೆ. ವಿದ್ಯಾಸಾಗರ್ ಅವರ ಸೂಚನೆ ಮೇರೆಗೆ ಪೊಲೀಸರು ಮುಂಬೈಗೆ ಆಗಮಿಸಿದ್ರು. ಯಾವುದೇ ಮುನ್ಸೂಚನೆಯಿಲ್ಲದೇ ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಬಂಧಿಸಿ ವಿಜಯವಾಡಕ್ಕೆ ಕರೆತಂದು ಕಸ್ಟಡಿಯಲ್ಲಿ ಇರಿಸಲಾಗಿತ್ತು ಎಂದು ಕೆಲ ದಿನಗಳ ಹಿಂದೆ ನಟಿ ಆರೋಪಿಸಿದ್ದರು. ಕಾನೂನುಬಾಹಿರ ಬಂಧನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರೆಂದು ಕೂಡಾ ಆರೋಪಿಸಿದ್ದರು. ಕಾದಂಬರಿ ಜೇತ್ವಾನಿ ಮತ್ತು ಪೋಷಕರನ್ನು ಸುಮಾರು 40 ದಿನಗಳ ಕಾಲ ವಶದಲ್ಲಿಡಲಾಗಿತ್ತು.