'ಇದು ಎಂಥಾ ಲೋಕವಯ್ಯಾ'. ಸ್ಯಾಂಡಲ್ವುಡ್ನ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅಭಿನಯದ 'ನಾರದ ವಿಜಯ' ಚಿತ್ರದ ಹಾಡು. ಇದೀಗ ಈ ಹಾಡಿನ ಶೀರ್ಷಿಕೆಯಲ್ಲಿ ಸಿನಿಮಾವೊಂದು ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಸಿತೇಶ್ ಸಿ.ಗೋವಿಂದ್ ನಿರ್ದೇಶನದ ಈ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಬಹುತೇಕ ಶೂಟಿಂಗ್ ಪೂರ್ಣಗೊಳಿಸಿಕೊಂಡಿರುವ 'ಇದು ಎಂಥಾ ಲೋಕವಯ್ಯಾ' ಚಿತ್ರಕ್ಕೆ ಹಿರಿಯ ನಟ ಅನಂತ್ ನಾಗ್ ಸಾಥ್ ನೀಡಿದ್ದಾರೆ.
'ಇದು ಎಂಥಾ ಲೋಕವಯ್ಯಾ' ಸಿನಿಮಾದ ಆಗಮನ ನಿನ್ನ ಆಗಮನ ಹಾಗೂ ಸಂಜೆ ವೇಳೆಗೆ ಎಂಬ ಎರಡು ಹಾಡುಗಳನ್ನು ಅನಾವರಣ ಮಾಡಲಾಗಿದೆ. ಇತ್ತೀಚೆಗೆ ಖಾಸಗಿ ಹೋಟೆಲ್ನಲ್ಲಿ ಹಿರಿಯ ನಟ ಅನಂತ್ ನಾಗ್ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಸಾಂಗ್ ರಿಲೀಸ್ ನಂತರ ಮಾತನಾಡಿದ ಹಿರಿಯ ನಟ ಅನಂತ್ ನಾಗ್, 'ಇದು ಎಂಥಾ ಲೋಕವಯ್ಯಾ' ನನ್ನ ಸಿನಿಮಾದ ಜನಪ್ರಿಯ ಹಾಡು. ಆ ಹಾಡಿನ ಟೈಟಲ್ ಈಗ ಸಿನಿಮಾ ಆಗಿದೆ. ಬಹಳ ಸಂತೋಷದಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಎಲ್ಲರ ಬೆಂಬಲದಿಂದ ಈ ಸಿನಿಮಾ ಯಶಸ್ಸು ಗಳಿಸಲಿ ಎಂದು ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಸಿತೇಶ್ ಸಿ ಗೋವಿಂದ್ ಮಾತನಾಡಿ, ಇದು ನನ್ನ ಮೊದಲ ಪ್ರಯತ್ನ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ಕಡಿಮೆ ಸಮಯದಲ್ಲಿ 28 ಕಲಾವಿದರು ನಟಿಸಿರುವ ಚಿತ್ರ ಇದು. ಫ್ಯಾಷನೇಟೆಡ್ ಆಗಿ ಸಿನಿಮಾ ಮಾಡಿದ್ದೇನೆ ಎಂದು ತಿಳಿಸಿದರು.
ಆಗಮನ ನಿನ್ನ ಆಗಮನ ಹಾಡಿಗೆ ರಾಹುಲ್ ಹಜಾರೆ ಹಾಗೂ ದೀಪಾ ಸಿತೇಸ್ ಸಾಹಿತ್ಯ ಬರೆದಿದ್ದು, ರಿತ್ವಿಕ್ ಎಸ್.ಚಂದ್ , ಭದ್ರ ರಾಜಿನ್ ಧ್ವನಿಯಾಗಿದ್ದಾರೆ. ಸಂಜೆ ವೇಳೆಗೆ ಹಾಡಿಗೆ ಸಜೀವ್ ಸ್ಟಾನ್ಲಿ ಕಂಠದಾನ ಮಾಡಿದ್ದು, ಕೀರ್ತನ್ ಭಂಡಾರಿ ಹಾಗೂ ಪುಷ್ಪರಾಜ್ ಗುಂಡ್ಯ ಪದ ಪೋಣಿಸಿದ್ದಾರೆ.
ಈ ಎರಡು ಗೀತೆಗೆ ರಿತ್ವಿಕ್ ಚಂದ್ ಸಂಗೀತ ಒದಗಿಸಿದ್ದಾರೆ. ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ಅರ್ಜುನ್ ಕಜೆ, ಪ್ರೀತಿ ಮುತ್ತಪ್ಪ, ದೀಪಕ್ ರೈ, ಸಂತೋಷ್ ಶೆಣೈ, ಸುಧೀರ್ ರಾಜ್, ಪ್ರಶಾಂತ್ ಜೋಗಿ, ಹರೀಶ್ ಬಂಗೇರ, ಪ್ರಕಾಶ್ ತುಮ್ಮಿನಾಡ್, ಸೇರಿದಂತೆ ಇನ್ನೂ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನನ್ನ ಕಣ್ಮುಂದೆ ನಡೆದ ಘಟನೆ': ನಿರ್ದೇಶಕ ಹೇಮಂತ್ ರಾವ್ - Director Hemanth Rao
ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕಥೆಯೇ 'ಇದು ಎಂಥಾ ಲೋಕವಯ್ಯಾ' ಸಿನಿಮಾ. ಈ ಕನ್ನಡ ಚಿತ್ರವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೇ ಆಗಸ್ಟ್ 9ರ ಶುಕ್ರವಾರ ಸಿತೇಶ್ ಸಿ.ಗೋವಿಂದ್ ನಿರ್ದೇಶನದ ಚೊಚ್ಚಲ ಚಿತ್ರ ತೆರೆಗೆ ಬರಲಿದೆ.
ಇದನ್ನೂ ಓದಿ: ಬರ್ತ್‌ಡೇ ಖುಷಿಯಲ್ಲಿ ಅಭಿಮಾನಿಗಳಿಗೆ ಮೂರು ಚಿತ್ರದ ಅಪ್ಡೇಟ್ಸ್ ಕೊಟ್ಟ ಮೇಘಾ ಶೆಟ್ಟಿ - Megha Shetty