ಹಾಲಿವುಡ್ನ ಪ್ರಖ್ಯಾತ ನಟಿ ಜ್ಯೂಲಿಯಾ ರಾಬರ್ಟ್ಸ್ ಅವರ ಸಹೋದರ ಎರಿಕ್ ರಾಬರ್ಟ್ಸ್ 'ಮೈ ಹೀರೋ' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ರನ್‍ಅವೇ ಟ್ರೈನ್, ದಿ ಸ್ಪೆಷಲಿಸ್ಟ್ ಸೇರಿದಂತೆ ನೂರಾರು ಚಿತ್ರಗಳಲ್ಲಿ ಎರಿಕ್ ಅಭಿನಯಿಸಿದ್ದಾರೆ. ಇವರ ಜೊತೆ ಜಿಲಾಲಿ ರಜ್ ಕಲ್ಲಹ್ ಎಂಬ ಮತ್ತೋರ್ವ ಹಾಲಿವುಡ್ ನಟ ಕೂಡಾ ಈ ಕನ್ನಡದ ಚಿತ್ರದಲ್ಲಿ ನಟಿಸಿದ್ದಾರೆ.
ಅವಿನಾಶ್ ವಿಜಯ್‍ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ 'ಮೈ ಹೀರೋ'. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ತಮ್ಮ ಚಿತ್ರದ ಬಗ್ಗೆ ಚಿತ್ರತಂಡ ಅನುಭವ ಹಂಚಿಕೊಂಡಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಅವಿನಾಶ್ ವಿಜಯಕುಮಾರ್, ನಾನು ಮೂಲತಃ ರಂಗಭೂಮಿ ಕಲಾವಿದ. ನನ್ನ ನಿರ್ದೇಶನದ ಚೊಚ್ಚಲ ಚಿತ್ರವಿದು. ಎ.ವಿ. ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಮ್ಮ ತಾಯಿ 2009ರಲ್ಲಿ "ಚಿಲಿಪಿಲಿ ಹಕ್ಕಿಗಳು" ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಹಿಂದುಳಿದವರ ಮೇಲೆ ನಡೆಯುವ ಶೋಷಣೆ ಕುರಿತಂತೆ ಮಾಡಿರುವ ಕಾನ್ಸೆಪ್ಟ್ ಇದು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಒಂದು ಘಟನೆ ನಡೆದಿತ್ತು. ಅದನ್ನು ಇಟ್ಟುಕೊಂಡು ಈ ಚಿತ್ರಕಥೆ ರಚಿಸಿದ್ದೇನೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಂಭಾಷಣೆ ಇರುತ್ತದೆ. ಹಳ್ಳಿಗಳಲ್ಲಿ ಈಗಲೂ ಜಾತಿ ಪದ್ಧತಿ ಇದೆ. ಬೇರೆ ಬೇರೆ ದೇಶಗಳಲ್ಲೂ ಸಹ ಇದೆ. ಇದನ್ನೇ ಪ್ರಮುಖವಾಗಿಟ್ಟಿಕೊಂಡು ಸಿನಿಮಾ ಮಾಡಿದ್ದೇನೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಕಂಟೆಂಟ್ ಓರಿಯಂಟೆಡ್ ಚಿತ್ರ ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಿ.ವಿ.ಆರ್ ಐನಾಕ್ಸ್ ಅವರು ವಿತರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಚಿತ್ರದಲ್ಲಿ ಹಾಲಿವುಡ್ ಕಲಾವಿದರಾದ ಜಿಲಾಲಿ ರಜ್ ಕಲ್ಲಹ್, ಎರಿಕ್ ರಾಬರ್ಟ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಮೈ ಹೀರೋ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಜಿಲ್ಲಾಧಿಕಾರಿಯಾಗಿ, ಹಿರಿಯನಟ ದತ್ತಣ್ಣ ಪುರೋಹಿತರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಅಂಕಿತಾ ಅಮರ್ ಮಧ್ಯಪ್ರದೇಶದ ಯುವತಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ: ಕ್ಯಾಮರಾಗೆ ಪೋಸ್ ಕೊಡುತ್ತಿದ್ದಂತೆ ಉರ್ಫಿ ಜಾವೇದ್ ಗೌನ್ನಲ್ಲಿ ಉರಿದ ಬೆಂಕಿ: ವಿಡಿಯೋ ನೋಡಿ - Urfi Javed
ಬಳಿಕ ಮಾತನಾಡಿದ ಅಂಕಿತಾ ಅಮರ್, ನಾನು ಈ ಚಿತ್ರದಲ್ಲಿ ಮಧ್ಯಪ್ರದೇಶದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಎನ್ಜಿಓ ಪಾತ್ರ ನನ್ನದು. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲಿ ವಾರಣಾಸಿಯಲ್ಲಿರುವಂತೆ ಅನೇಕ ಘಾಟ್ಗಳಿದೆ. ಅಹಿಲ್ಯ ಬಾಯಿ ಎಂಬ ಮಹಾರಾಣಿ ಈ ಘಾಟ್ಗಳನ್ನು ನಿರ್ಮಿಸಿದ್ದರು. ಅಲ್ಲಿ ಅವರ ಪ್ರತಿಮೆ ಕೂಡ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ನಾನು ಅಲ್ಲಿನ ವಿಷಯಗಳನ್ನು ತಿಳಿದುಕೊಂಡು ಬಳಿಕ ಅಭಿನಯಿಸಿರುವುದಾಗಿ ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ನಟಿ ಶ್ರುತಿ - Actress Shruti
'ಮೈ ಹೀರೋ' ಚಿತ್ರಕ್ಕೆ ಗಗನ್ ಭಡೇರಿಯಾ ಸಂಗೀತ ನೀಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಕ ಅವಿನಾಶ್ ವಿಜಯ ಕುಮಾರ್ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ನಿಂದ ಗಮನ ಸೆಳೆಯುತ್ತಿರೋ ಮೈ ಹೀರೋ ಚಿತ್ರ ಇದೇ ಆಗಸ್ಟ್ ಕೊನೆಗೆ ತೆರೆಗಪ್ಪಳಿಸಲಿದೆ.