'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗಿರುವ ಹೊಸ ಸಿನಿಮಾ. ಸುಂದರ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೂಡಾ ಹೌಡು. ಸ್ಯಾಂಡಲ್ವುಡ್ನ ಖ್ಯಾತ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಸಿನಿಮಾ ಪ್ರಮೋಶನ್ ಭಾಗವಾಗಿ 'ಹೇಳು ಗೆಳತಿ' ಎಂಬ ಹಾಡು ಅನಾವರಣಗೊಂಡಿದೆ.
ರಕ್ಷಿತ್ ಶೆಟ್ಟಿ ಪೋಸ್ಟ್: 'ಹೇಳು ಗೆಳತಿ' ಹಾಡಿನ ಪೋಸ್ಟರ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ಸಾಂಗ್ ರಿಲೀಸ್ ಆಗಿದೆ ಎಂದು ತಿಳಿಸಿದ್ದಾರೆ. ''ಮೌನದಲ್ಲಿ ಮೆಲ್ಲೆ ಇಣುಕಿ ಬಿಸಿಲ ಕಾದು, ಕಾದ ಕಿಟಕಿ'' ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಹಾಡು ಸಿನಿಪ್ರಿಯರ, ಗಾನಪ್ರಿಯರ ಗಮನ ಸೆಳೆಯುತ್ತಿದೆ. ಸಾಹಿತ್ಯ ಅರ್ಥಗರ್ಭಿತವಾಗಿದೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
'ಹೇಳು ಗೆಳತಿ' ನಾಗಾರ್ಜುನ್ ಶರ್ಮಾ ಅವರ ಸಾಹಿತ್ಯ ಒಳಗೊಂಡಿದೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಚರಣ್ ರಾಜ್ ಸುಮಧುರ ದನಿಯಲ್ಲಿ ಮೂಡಿಬಂದಿದೆ.
ಅಭಿಮಾನಿಗಳ ಪ್ರತಿಕ್ರಿಯೆಗಳು: ರಕ್ಷಿತ್ ಶೆಟ್ಟಿ ಪೋಸ್ಟ್ಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು, 'ಹಾಡು ಅದ್ಭುತವಾಗಿದೆ, ತಪ್ಪದೇ ಎಲ್ಲರೂ ಎಲ್ರೂ ಕೇಳಿ. ಖಂಡಿತಾ ಖುಷಿ ಪಡುತ್ತೀರಾ' ಎಂದು ತಿಳಿಸಿದ್ದಾರೆ. ಮತ್ತೋರ್ವರು, 'ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾಹಿತ್ಯ ಮತ್ತು ಇಂಪಾದ ಸಂಗೀತ ಬಹಳ ಅಪರೂಪ' ಎಂದಿದ್ದಾರೆ. ಅಮೇಝಿಂಗ್ ಎಂದು ಇನ್ನೋರ್ವರು ಪ್ರತಿಕ್ರಿಯಿಸಿದ್ದಾರೆ. ಉಳಿದಂತೆ ಹಲವರು ಹಾರ್ಟ್ ಸಿಂಬಲ್ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಸಿನಿಮಾ ಟಿಕೆಟ್ ಮೇಲೆ ಸೆಸ್: 'ಪ್ರೇಕ್ಷಕರಿಗೆ, ನಿರ್ಮಾಪಕರಿಗೆ ಹೊರೆ' - ಫಿಲ್ಮ್ ಚೇಂಬರ್ ಅಧ್ಯಕ್ಷ - NM Suresh
'ಇಬ್ಬನಿ ತಬ್ಬಿದ ಇಳೆಯಲಿ' 2024ರ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. 'ಪಂಚತಂತ್ರ' ಸಿನಿಮಾ ಖ್ಯಾತಿಯ ವಿಹಾನ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಹಾನ್ 5 ವರ್ಷಗಳ ಬ್ರೇಕ್ ಬಳಿಕ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ಅಂಕಿತ ಅಮರ್ ನಾಯಕಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಕಿರುತೆರೆ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಅಂಕಿತ 'ಇಬ್ಬನಿ ತಬ್ಬಿದ ಇಳೆಯಲಿ' ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಮಯೂರಿ ನಟರಾಜ್ ಅವರೂ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಗಿರಿಜಾ ಶೆಟ್ಟರ್ ಸಹ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ 'ಫೈರ್ ಫ್ಲೈ' ಆಡಿಯೋ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟ - Firefly Audio Rights Sold
ಆಗಸ್ಟ್ 2ರಂದು ಸಿನಿಮಾ ತೆರೆಗೆ: ಶ್ರೀವತ್ಸನ್ ಸೆಲ್ವರಾಜನ್ ಅವರ ಕ್ಯಾಮರಾ ಕೈಚಳಕವಿದೆ. ವಿಎಫ್ಎಕ್ಸ್ ಕೆಲಸ ಪಿನಾಕ ಸ್ಟುಡಿಯೋದಲ್ಲಿ ನಡೆದಿದೆ. ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್.ಗುಪ್ತ ಮತ್ತು ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಿಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ. ಸಿನಿಮಾ ಆಗಸ್ಟ್ 2 (ಶುಕ್ರವಾರ) ರಂದು ಚಿತ್ರಮಮಂದಿರ ಪ್ರವೇಶಿಸಲಿದೆ.