ಹುಬ್ಬಳ್ಳಿ (ಧಾರಾವಾಡ): ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ದಂಪತಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಗರದಲ್ಲಿರುವ ಜೋಶಿ ಅವರ ಮನೆಗೆ ಭೇಟಿ ನೀಡಿದ ದಂಪತಿ, ತಮ್ಮ ಮೇಲಾಗಿರುವ ಹಲ್ಲೆ ಕುರಿತು ಚರ್ಚೆ ಮಾಡಿದರು. ತಮ್ಮ ಮೇಲೆ ನಡೆದ ದೌರ್ಜನ್ಯದ ಕುರಿತು ಸಂಪೂರ್ಣವಾಗಿ ವಿವರಿಸಿದ್ದು, ಸಚಿವರು ಚುನಾವಣೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಜೋಶಿ ತಾರಾ ದಂಪತಿಗೆ ಧೈರ್ಯ ತುಂಬಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ, ನಾವು ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ. ನಮಗೆ ಆದ ತೊಂದರೆಗೆ ಪ್ರಹ್ಲಾದ್ ಜೋಶಿ ಅವರು ಸ್ಪಂದಿಸಿದ್ದರು. ಅವರಿಗೆ ಧನ್ಯವಾದ ತಿಳಿಸಲು ಮನೆಗೆ ಬಂದಿದ್ದೇವೆ. ನಾವು ಯಾರ ತಂಟೆಗೂ ಹೋಗದೇ ನಮ್ಮ ಪಾಡಿಗೆ ನಾವಿದ್ದೇವೆ. ರೆಸ್ಟೋರೆಂಟ್‌ಗೆ ಹೋದಾಗ ಕೆಲವರು ತೊಂದರೆ ಕೊಟ್ಟಿದ್ದಾರೆ. ಕನ್ನಡ ಮಾತನಾಡಿದ್ದಕ್ಕೆ ನಮ್ಮ ಜೊತೆ ಜಗಳ ಮಾಡಿದ್ದಾರೆ. ಸಾಕಷ್ಟು ಜನರು ಜಮಾಯಿಸಿ ದೌರ್ಜನ್ಯ ನಡೆಸಿದರು. ಕತ್ತಲ್ಲಿದ್ದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಸೆಲೆಬ್ರಿಟಿಗಳಿಗೇನೇ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು? ಎಂದು ಪ್ರಶ್ನಿಸಿದರು.
ಇದೇ ವೇಳೆ ಮಾತನಾಡಿದ ನಟ ಭುವನ್ ಪೊನ್ನಣ್ಣ, ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಜೋಶಿ ಸರ್ ಅವರನ್ನು ಭೇಟಿಯಾಗಿ ನಮಗಾದ ತೊಂದರೆ ಬಗ್ಗೆ ಮಾಹಿತಿ ನೀಡಿದ್ದೇವೆ. ಎಲೆಕ್ಷನ್ ಆದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೋಶಿ ಸರ್ ಭೇಟಿಯಾಗಿ ಧೈರ್ಯ ಬಂದಿದೆ. ಬೆಂಗಳೂರು ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ನಟಿ ಹರ್ಷಿಕಾ ದಂಪತಿ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು - Actress Harshika Poonacha
ಕಾಂಗ್ರೆಸ್ ವಿರುದ್ಧ ಕಿಡಿ: ರಾಹುಲ್ ಗಾಂಧಿ ಭಾಷಣ, ಕಾಂಗ್ರೆಸ್ ಮ್ಯಾನಿಫ್ಯಾಸ್ಟೋ ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಿದೆ. ಜನರ ಬಳಿ ಎರಡು ಬೈಕ್, ಮನೆ ಇದ್ದರೆ ಒಂದು ಕಸಿದುಕೊಳ್ಳುತ್ತಾರೆ. ಕಾಂಗ್ರೆಸ್ ಪಾರ್ಟಿ ದೇಶಕ್ಕೆ ವೆಲ್ತ್ ಕ್ರಿಯೇಟ್ ಮಾಡುವವರ ವಿರುದ್ಧ ಹೊರಟಿದೆ ಎಂದು ಕಿಡಿಕಾರಿದರು. ಮಾವೋವಾದಿ ಮನಸ್ಥಿತಿ ಇಟ್ಟುಕೊಂಡು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಫೇಲ್ ಆಗಿರುವ ಮಾವೋವಾದಿ ವಿಚಾರದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್‌ನವರು ತುಷ್ಟೀಕರಣದ ಪರಾಕಾಷ್ಟೆ ತಲುಪುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಸಹಜ: ಜೋಶಿ - Prahlad Joshi