ಗಾಯಕ, ನಟ ಜಿ.ವಿ.ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ವೈಯಕ್ತಿಕ ಕಾರಣಗಳಿಗಾಗಿ 11 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದಾರೆ. ವಿಚ್ಛೇದನ ವಿಚಾರವನ್ನು ಜಿ.ವಿ.ಪ್ರಕಾಶ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ.
ಪ್ರಕಾಶ್ ಮತ್ತು ಸೈಂಧವಿ ತಮ್ಮ 11ನೇ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ತಿಂಗಳು ಮೊದಲು ಈ ನಿರ್ಧಾರ ಕೈಗೊಂಡಿದ್ದಾರೆ.
"ಈ ಬಗ್ಗೆ ಗಾಢವಾಗಿ ಯೋಚಿಸಿದ ನಂತರ, ಸೈಂಧವಿ ಮತ್ತು ನಾನು ಹನ್ನೊಂದು ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿದ್ದೇವೆ" ಎಂದು ಮೇ 13ರಂದು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಜಿ.ವಿ.ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.
ಪರಸ್ಪರ ಒಪ್ಪಿಗೆ ಮೇಲೆ ದಂಪತಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ಈ ಹೇಳಿಕೆ ಸೂಚಿಸಿದೆ.
"ನಾವು ಬೇರೆಯಾಗುತ್ತಿದ್ದೇವೆ. ಇದು ಪರಸ್ಪರ ಅತ್ಯುತ್ತಮ ನಿರ್ಧಾರ ಎಂದು ನಂಬಿದ್ದೇವೆ. ಇಂಥ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ, ಬೆಂಬಲ ನಮಗೆ ಅತ್ಯಗತ್ಯ ಮತ್ತು ಮೌಲ್ಯಯುತವಾಗಿವೆ. ಧನ್ಯವಾದಗಳು" ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಬರೆದಿದ್ದಾರೆ.
''ವೈಯಕ್ತಿಕ ಪರಿವರ್ತನೆಯ ಸಂದರ್ಭದಲ್ಲಿ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಳ್ಳಲು, ಗೌರವಿಸಲು ನಾವು ಮಾಧ್ಯಮ, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತಿದ್ದೇವೆ'' ಎಂದು ತಿಳಿಸುವ ಮೂಲಕ ಈ ಪೋಸ್ಟ್ ಪೂರ್ಣಗೊಳಿಸಿದ್ದಾರೆ. ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಅಕ್ಷಯ್-ಪ್ರಿಯದರ್ಶನ್ ಕಾಂಬೋದಲ್ಲಿ ಹೊಸ ಸಿನಿಮಾ: ಈ ಮೂವರಲ್ಲಿ ಯಾರು ಹೀರೋಯಿನ್? - Akshay Kumar Movie Updates
ಜಿ.ವಿ.ಪ್ರಕಾಶ್ ಮತ್ತು ಸೈಂಧವಿ ಜೋಡಿಯ ಪ್ರೇಮ್ ಕಹಾನಿ ಬಹುಕಾಲದ್ದು. ಶಾಲಾ ದಿನಗಳಿಂದಲೂ ಇಬ್ಬರು ಪ್ರೀತಿಯಲ್ಲಿದ್ದರು. ಅಂತಿಮವಾಗಿ, 2013ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು. 2016ರಲ್ಲಿ ಮೊದಲ ಮಗು ಅವ್ನಿಗೆ ಪೋಷಕರಾಗಿದ್ದರು. ಸೈಂಧವಿ ಕರ್ನಾಟಿಕ್ ಗಾಯಕಿ ಮತ್ತು ಮ್ಯೂಸಿಶಿಯನ್. ಪ್ರಕಾಶ್ ಕುಮಾರ್ ಗಾಯಕ ಮತ್ತು ನಟನಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ಅಲ್ಲು ಅರ್ಜುನ್? ನಟ ಕೊಟ್ಟ ಸ್ಪಷ್ಟನೆ ಹೀಗಿದೆ - Allu Arjun
ಜಿ.ವಿ.ಪ್ರಕಾಶ್ ಅವರು ಎ.ಆರ್.ರೆಹಮಾನ್ ಸೋದರಳಿಯ: ಪ್ರಕಾಶ್ ಮತ್ತು ಸೈಂಧವಿ ಹಲವು ಪ್ರಾಜೆಕ್ಟ್ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹಲವು ಟ್ಯೂನ್‌ಗಳನ್ನೂ ರಚಿಸಿದ್ದಾರೆ. ಜಿ.ವಿ.ಪ್ರಕಾಶ್ ಆಸ್ಕರ್ ಪ್ರಶಸ್ತಿ ವಿಜೇತ ಗಾಯಕ ಎ.ಆರ್.ರೆಹಮಾನ್ ಅವರ ಸೋದರಳಿಯ. ಸಹೋದರಿ ಎ.ಆರ್.ರೆಹಾನಾ ಅವರ ಪುತ್ರ ಪ್ರಕಾಶ್. ಕುಮಾರ್ ಪ್ರಸ್ತುತ ಹಲವು ಭಾಷೆಗಳ ಮನರಂಜನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿಯ ವಿಕ್ರಮ್ ಅವರ ತಂಗಲಾನ್, ಕಂಗನಾ ರಣಾವತ್ ಅವರ ಎಮರ್ಜೆನ್ಸಿ, ಅಕ್ಷಯ್ ಕುಮಾರ್ ಅವರ ಸರ್ಫಿರಾ, ನಿತಿನ್ ಅವರ ರಾಬಿನ್ ಹೂಡ್, ಸೂರ್ಯ ಅವರ ಹೆಸರಿಡದ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್ಗಳ ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾರೆ. ಸಂಗೀತ ಅಲ್ಲದೇ, ನಟನಾಗಿ ಇಡಿಮುಝಕ್ಕಂ, 13, ಕಲ್ವನ್ ಮತ್ತು ಡಿಯರ್ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.