"ಹರಿವು", "ನಾತಿಚರಾಮಿ", "ಆಕ್ಟ್ 1978,19.20.21" ಅಂತಹ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಿರ್ದೇಶಕ ಮಂಸೋರೆ ನಿರ್ದೇಶಿಸುತ್ತಿರುವ ಮುಂದಿನ ಚಿತ್ರ "ದೂರ ತೀರ ಯಾನ". ಯುವ ಪ್ರತಿಭೆಗಳಾದ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕಾ ಕುಮಾರ್ ಅಭಿನಯಿಸುತ್ತಿದ್ದು ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಅನಾವರಣ ಮಾಡಲಾಗಿತ್ತು. ಬಳಿಕ ಚಿತ್ರತಂಡ ಈ ಸಿನಿಮಾ ಅನುಭವನ್ನು ಹಂಚಿಕೊಂಡಿದೆ.
ಮೊದಲಿಗೆ ಮಾತನಾಡಿದ ನಿರ್ದೇಶಕ ಮಂಸೋರೆ, "ನನ್ನ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದೀರಾ. ಅದನ್ನು ಮೀರಿಸುವ ಪ್ರಯತ್ನ 'ದೂರ ತೀರ ಯಾನ'. ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ನಿರೀಕ್ಷೆಗಳು ಸಾಕಷ್ಟಿವೆ. ಹೀಗೆ ನಾವು ಬದಲಾದ ಪರಿಸ್ಥಿತಿಗೆ ಹೊಂದುಕೊಂಡು, ಅವರಿಗೆ ಬೇಕಾದ ರೀತಿಯ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ ಈಗ ನಾನು ಮಾಡಲು ಹೊರಟಿರುವ ಸಿನಿಮಾ ದೂರ ತೀರ ಯಾನ".
"ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ ಹಾಗು ಹುಡುಗಿ ಹೊಸರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆ. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್ ಸಿರೀಸ್ಗಳಲ್ಲಿ ಹಾಗೂ ನನ್ನ ನಿರ್ದೇಶನದ ಆಕ್ಟ್ 1978 ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, ರುದ್ರ ಗರುಡ ಪುರಾಣ ಚಿತ್ರದ ಖ್ಯಾತಿಯ ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಪಾತ್ರಗಳು ಇರುತ್ತದೆ. ಮುಂದೆ ಅದರ ಬಗ್ಗೆ ತಿಳಿಸುತ್ತೇನೆ. ಇನ್ನು ಟೈಟಲ್ ಟೀಸರ್ಗೆ ಡಾಲಿ ಧನಂಜಯ್ ಧ್ವನಿ ನೀಡಿದ್ದು, ಅವರಿಗೆ ನನ್ನ ಧನ್ಯವಾದ" ಅಂದರು.
ಯುವ ನಟ ವಿಜಯಕೃಷ್ಣ ಮಾತನಾಡಿ, 'ತುಂಬಾ ದಿನಗಳಿಂದ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಗೆಳೆಯ ಮಂಸೋರೆ ಒಂದೊಳ್ಳೆ ಕಥೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ" ಎಂದರು.
ನಟಿ ಪ್ರಿಯಾಂಕಾ ಕುಮಾರ್ ಮಾತನಾಡಿ, "ರುದ್ರ ಗರುಡ ಪುರಾಣದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಚಿತ್ರದಲ್ಲಿ ಆ ಪಾತ್ರ ಸಿಕ್ಕಿದೆ ಎಲ್ಲರಿಗೂ ನನ್ನ ಪಾತ್ರ ಇಷ್ಟ ಆಗುತ್ತೆ" ಎಂದು ತಿಳಿಸಿದರು.
ಡಿ.ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ .ಆರ್. "ದೂರ ತೀರ ಯಾನ" ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಬಕೇಶ್ ಹಾಗೂ ಕಾರ್ತಿಕ್ ಸಂಗೀತವಿದೆ. ಹಾಗೇ ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನ, ಚೇತನ ತೀರ್ಥಹಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಸದ್ಯ ಟೀಸರ್ನಿಂದ ಗಮನ ಸೆಳೆಯುತ್ತಿರುವ ದೂರ ತೀರಯಾನ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ನಿಂದ ಶುರುವಾಗಲಿದೆ.
ಇದನ್ನೂ ಓದಿ: ನಾಗರಾಜ್ ಪೀಣ್ಯರ 'ಅತಿಕಾಯ'ದಲ್ಲಿ ಉಗ್ರಾವತಾರ ತಾಳಿದ ನಿರೂಪ್ ಭಂಡಾರಿ - Atikaya