ಸ್ಯಾಂಡಲ್ವುಡ್ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್, ಹ್ಯಾಂಡ್ಸಮ್ ಹಂಕ್ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದಾರೆ. ಮದುವೆ ಯಾವಾಗ ಎನ್ನುವ ಪ್ರಶ್ನೆ ಡಾಲಿಗೆ ಯಾವಾಗಲೂ ಎದುರಾಗುತ್ತಿತ್ತು. ಕೊನೆಗೂ ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಧನಂದಯ ಮದುವೆ ಸುದ್ದಿ ಹಂಚಿಕೊಂಡಿದ್ದಾರೆ. ಡಾಲಿ ಯಾರನ್ನು ಮದುವೆಯಾಗುತ್ತಾರೆ? ಚಿತ್ರರಂಗದವರಾ ಅಥವಾ ಬೇರೆ ಕ್ಷೇತ್ರದವರನ್ನು ಮದುವೆಯಾಗುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಿಗಿತ್ತು. ಇದೀಗ ಆ ಎಲ್ಲ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಧನಂಜಯ ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ. ಹೌದು ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಗೈನಕಾಲಜಿಸ್ಟ್ ಆಗಿರುವ ಧನ್ಯತಾ ಡಾಲಿ ಅವರನ್ನು ವರಿಸಲಿದ್ದಾರೆ.
ಅನೇಕ ವರ್ಷಗಳಿಂದ ಪರಿಚಯ: ಡಾಲಿ ಮತ್ತು ಧನ್ಯತಾ ಇಬ್ಬರಿಗೂ ಅನೇಕ ವರ್ಷಗಳಿಂದ ಪರಿಚಯ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಕೂಡ ಓದಿದ್ದು ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಸುಂದರವಾಗಿ ಕಂಗೊಳಿಸುತ್ತಿದ್ದಾರೆ. ಕವಿ ದ.ರಾ.ಬೇಂದ್ರೆ ಅವರ ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ ಧನಂಜಯ. ಧನ್ಯತಾ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಇಬ್ಬರ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯ ಹರಿದುಬರುತ್ತಿದೆ.
ಮುಂದಿನ ಫೆಬ್ರವರಿಯಲ್ಲಿ ಸಪ್ತಪದಿ: ಅಂದ ಹಾಗೆ ಇಬ್ಬರು ಮುಂದಿನ ವರ್ಷ ಫೆಬ್ರವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಫೆಬ್ರವರಿ 16 ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ. ಅದ್ಧೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ, ನಂತರ ಅದೇ ದಿನ ಅದೇ ಗ್ರೌಂಡ್ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.
ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳ. ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ. ಸದ್ಯ ಗುಡ್ ನ್ಯೂಸ್ ನೀಡಿರುವ ಧನಂಜಯ್ಗೆ ಶುಭಾಶಯಗಳು ಮಹಾಪೂರವೇ ಹರಿದು ಬರುತ್ತಿವೆ.
ಇದನ್ನೂ ಓದಿ: ನಾಗ ಚೈತನ್ಯ ಶೋಭಿತಾ ಧೂಳಿಪಾಲ ಮದುವೆಗೆ ಸಿದ್ಧತೆ: ದಿನಾಂಕ ಇಲ್ಲಿದೆ