2023ರ ಆಗಸ್ಟ್ 24ರಂದು ದಾಂಪತ್ಯ ಜೀವನ ಶುರು ಮಾಡಿದ್ದ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮುಂದಿನ ತಿಂಗಳು ಅಕ್ಟೋಬರ್ನಲ್ಲಿ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಇದೀಗ ತುಂಬು ಗರ್ಭಿಣಿ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಕಾರ್ಯಕ್ರಮ ನೆರವೇರಿದೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಈ ಕಾರ್ಯಕ್ರಮ ಆಯೋಜಿಸಿದ್ದರು ಅನ್ನೋದು ವಿಶೇಷ.
ನಟಿ ಹರ್ಷಿಕಾ ಪೂಣಚ್ಚ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಜೊತೆ ಜೊತೆಗೆ ಸಿನಿಮಾ ರಂಗದಲ್ಲಿ ಆತ್ಮೀಯ ಸ್ನೇಹಿತರನ್ನು ಹೊಂದಿದ್ದಾರೆ. ಸದ್ಯ ಮೊದಲ ಮಗುವಿನ ಆಗಮನದ ಖುಷಿಯಲ್ಲಿರುವ ತಾರಾ ದಂಪತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸರ್ಪ್ರೈಸ್ ನೀಡಿದ್ದಾರೆ. ಗಣೇಶ್ ಆರ್ಆರ್ ನಗರದಲ್ಲಿರೋ ತಮ್ಮ ನಿವಾಸದಲ್ಲಿ ಹರ್ಷಿಕಾ ಅವರ ಬೇಬಿ ಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಯ ಗೆಳೆಯರನ್ನು ಆಹ್ವಾನಿಸಿದ್ದರು.
ಈವೆಂಟ್ನಲ್ಲಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ, ಮಗಳು ಆರಾಧನಾ, ಶೃತಿ ಹಾಗೂ ಮಗಳು ಗೌರಿ, ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ರಘು ಮುಖರ್ಜಿ, ಶರಣ್ಯ, ನಿಕಿತಾ, ಅಮೂಲ್ಯ ಜಗದೀಶ್ ದಂಪತಿ, ದಿಶಾ ಹಾಗೂ ಡಾ.ಪ್ರೀತಿ ಸುಧಾಕರ್, ಶೀಲಾ ಯೋಗೀಶ್ವರ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾಣಿಸಿಕೊಂಡರು.
ಶೀಘ್ರದಲ್ಲೇ ತಾಯಿಯಾಗಲಿರುವ ಹರ್ಷಿಕಾಗೆ ಉಡುಗೊರೆಗಳ ಸುರಿ ಮಳೆಯೇ ಬಂದಿದೆ. ಸಮಾರಂಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಒಟ್ಟಿಗೆ ಕುಣಿದು ಕುಪ್ಪಳಿಸಿ, ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು. ಶೃತಿ ಅವರ ಮಗಳು ಗೌರಿ ಹರ್ಷಿಕಾ ಅವರಿಗಾಗಿ ಹಾಡಿ ಸರ್ಪ್ರೈಸ್ ನೀಡಿದ್ದಾರೆ.
ಬೇಬಿ ಥೀಮ್ ಕೇಕ್, ಡೆಕೋರೇಷನ್ ಬೇಬಿ ಶವರ್ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ಈ ಎಲ್ಲ ಕಾರ್ಯಗಳನ್ನು ಶಿಲ್ಪಾ ಗಣೇಶ್ ಅವರು ಖುದ್ದಾಗಿ ಮುಂದೆ ನಿಂತು ಈ ಯುವಜೋಡಿಗಾಗಿ ಮಾಡಿದ್ದಾರೆ. ಹರ್ಷಿಕಾ ಭುವನ್ ದಂಪತಿ ಅಕ್ಟೋಬರ್ನಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ.
ಇದನ್ನೂ ಓದಿ: ಆಸ್ಕರ್ ಪ್ರವೇಶಿಸಿದ 'ಲಾಪತಾ ಲೇಡೀಸ್': ನಿರ್ದೇಶಕಿ ಕಿರಣ್ ರಾವ್ ಮನದ ಮಾತು ಹೀಗಿದೆ - Kiran Rao
ಚಿತ್ರರಂಗದಲ್ಲಿ ಗುರುತಿಸಿಕೊಂಡು, ಪ್ರೀತಿಸಿ ಮದುವೆಯಾಗಿ ಸುಂದರ ವೈವಾಹಿಕ ಜೀವನ ನಡೆಸುತ್ತಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹರ್ಷಿಕಾ ಭುವನ್ ಕೂಡಾ ಇದೇ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಸರಿಸುಮಾರು 10 ವರ್ಷಗಳಿಂದ ಸಿನಿ ಕ್ಷೇತ್ರದಲ್ಲಿ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಈ ಜೋಡಿ 2023ರಲ್ಲಿ ಹಸೆಮಣೆ ಏರಿದರು. ಈ ಸಾಲಿನ ಜುಲೈ 2ರಂದು ತಾವು ಪೋಷಕರಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು. ಮುಂದಿನ ತಿಂಗಳು ಮಗುವಿನ ಜನನವಾಗಲಿದೆ. ಇತ್ತೀಚೆಗಷ್ಟೇ ''ಹಗ್ಗ'' ಸಿನಿಮಾದ ಟ್ರೇಲರ್ ರಿಲೀಸ್ ಈವೆಂಟ್ನಲ್ಲೂ ನಟಿಯ ಸೀಮಂತ ನಡೆದಿತ್ತು.