ಇಂದು ರಾಜ್ಯಾದ್ಯಂತ ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಜನ್ಮದಿನದ ಸಂಭ್ರಮ ಕಳೆಗಟ್ಟಿತ್ತು. ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಕನ್ನಡದ ಕಂಪನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಸರಸ್ವತಿ ಪುತ್ರ ಡಾ.ರಾಜ್‌ಕುಮಾರ್ ಅವರ ಹುಟ್ಟಿದ ದಿನದಂದು ಪುನೀತ್ ರಾಜ್‌ಕುಮಾರ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈ ಕುರಿತು ಅಶ್ವಿನಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಒದಗಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಕ್ಸ್ ಪೋಸ್ಟ್: ''ಇಂದು ಅಪ್ಪಾಜಿಯವರ 95ನೇ ಜನ್ಮದಿನಾಚರಣೆಯ ಅಂಗವಾಗಿ ಹಾಗೂ ಗಂಧದಗುಡಿ ಚಿತ್ರದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಇದನ್ನು ಅಪ್ಪು ಅವರ ಗಂಧದಗುಡಿ ಅಗರಬತ್ತಿಯ ಶುಭಾರಂಭದೊಂದಿಗೆ ಸ್ಮರಿಸೋಣ'' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಗಂಧದಗುಡಿ ಅಗರಬತ್ತಿ ಬಳಸಿ ಸಮಾಧಿಗೆ ಪೂಜೆ: ವಿಶೇಷ ಅಂದ್ರೆ, ಇಂದು ಕಂಠೀವರ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್ ಸಮಾಧಿಗೆ ಅಪ್ಪು ಗಂಧದಗುಡಿ ಅಗರಬತ್ತಿ ಬಳಸಿ ಪೂಜೆ ಮಾಡುವ ಮೂಲಕ ಗಂಧದಗುಡಿ ಅಗರಬತ್ತಿ ಉದ್ಯಮಕ್ಕೆ ಚಾಲನೆ ನೀಡಲಾಯಿತು. ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಅಶ್ವಿನಿ ಹಾಗೂ ಮಗಳು ವಂದಿತಾ ಸೇರಿದಂತೆ ಕುಟುಂಬದ ಕೆಲ ಸದಸ್ಯರು ಈ ಅಗರಬತ್ತಿಯಿಂದ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು.
ಹೊಸ ಪ್ರತಿಭೆಗಳಿಗೆ ಪಿಆರ್ಕೆ ಪ್ರೋತ್ಸಾಹ: ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಪಿಆರ್ಕೆ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಅಶ್ವಿನಿ ನಿರ್ಮಾಪಕಿಯಾಗಿ ಹೊಸ ನಿರ್ದೇಶಕರು, ಯುವ ನಟ-ನಟಿಯರಿಗೆ ಅವಕಾಶ ನೀಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಇದನ್ನೂ ಓದಿ: ನಟಸಾರ್ವಭೌಮನ ಜನ್ಮದಿನ: ರಾಜ್ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ - Dr Rajkumar
ಇತ್ತೀಚಿಗೆ 'O2' ಎಂಬ ಹೆಸರಿನಲ್ಲಿ ಮೆಡಿಕಲ್ ಕುರಿತಾದ ಸಿನಿಮಾವನ್ನು ಪಿಆರ್ಕೆ ಸಂಸ್ಥೆಯಡಿ ನಿರ್ಮಾಣ ಮಾಡಿ ಬಿಡುಗಡೆ ಮಾಡಲಾಗಿತ್ತು. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು '02' ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಶ್ರದ್ಧಾ ಎಂಬ ಪಾತ್ರವನ್ನು ಆಶಿಕಾ ರಂಗನಾಥ್ ನಿರ್ವಹಿಸಿದ್ದಾರೆ. ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್ ಚಿತ್ರ ಬರೆದು ನಿರ್ದೇಶಿಸಿದ್ದಾರೆ. ರಾಘವ್ ನಾಯಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರ ಸಿನಿಪ್ರಿಯರು ಹಾಗೂ ವಿಮರ್ಶಕರಿಂದ ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ.
ಇದನ್ನೂ ಓದಿ: ಡಾ. ರಾಜ್ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ನಟಸಾರ್ವಭೌಮ - Dr Raj Birth Anniversary