ಪರಭಾಷೆಯಂತೆ ಕನ್ನಡ ಚಿತ್ರರಂಗದಲ್ಲೂ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಆದರಲ್ಲೂ ಕ್ರೀಡೆಗೆ ಸಂಬಂಧಿಸಿದ ಸಿನಿಮಾಗಳು ಸಿನಿಪ್ರಿಯರನ್ನು ಸೆಳೆಯುತ್ತಿವೆ. ಇದೀಗ 'ಸಹಾರಾ' ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಕಥೆಯುಳ್ಳ ಸಿನಿಮಾ ತೆರೆಗೆ ಬರಲು ಅಣಿಯಾಗುತ್ತಿದೆ. ಶೂಟಿಂಗ್ ಕೆಲಸ ಮುಗಿದಿದ್ದು, ಬಿಡುಗಡೆ ಹೊಸ್ತಿಲಲ್ಲಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ಅವರು ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಬಳಿಕ ಮಾತನಾಡಿದ ಕೆ.ಗೌತಮ್, "ಕ್ರಿಕೆಟ್ ಕಥೆ ಒಳಗೊಂಡಿರುವ ಚಿತ್ರ ಇದು. ಟ್ರೇಲರ್ ರಿಯಲಿಸ್ಟಿಕ್ ಆಗಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದರು.
ನಟಿ ಸಾರಿಕಾ ರಾವ್ ಮಾತನಾಡಿ, "ಇದು ಸ್ಫೂರ್ತಿದಾಯಕ ಕಥೆ. ನಾನು ಜವಾಬ್ದಾರಿಯಿಂದ ನನ್ನ ಪಾತ್ರ ನಿರ್ವಹಿಸಿದ್ದೇನೆ. ಮಹಿಳಾ ಪ್ರಧಾನ ಸಿನಿಮಾವನ್ನು ನಿರ್ದೇಶಕರಾದ ಮಜೇಶ್ ಅವರು ಕನ್ನಡ ಇಂಡಸ್ಟ್ರಿಗೆ ಕೊಡುತ್ತಿದ್ದಾರೆ. ಸುದೀಪ್ ಸರ್, ಸಿಂಪಲ್ ಸುನಿ ಸರ್, ಅಶ್ವಿನಿ ಮೇಡಂ ಅವರೆಲ್ಲಾ ಹೊಸಬರಿಗೆ ಸಾಥ್ ಕೊಟ್ಟಿದ್ದಾರೆ" ಎಂದು ಸಂತಸ ಹಂಚಿಕೊಂಡರು.
![RCB CRICKETER WOMEN CRICKETER SANDAL WOOK](https://etvbharatimages.akamaized.net/etvbharat/prod-images/27-05-2024/kn-bng-01-kannadadli-bartha-eide-women-crickter-storya-cinema-7204735_27052024101703_2705f_1716785223_34.jpg)
'ಸಹಾರಾ'ದಲ್ಲಿ ಮಂಡ್ಯ ಹುಡುಗಿಯ ಪಾತ್ರದಲ್ಲಿ ಸಾರಿಕಾ ರಾವ್ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ರಣಜಿ ಆಟಗಾರರಾದ ಕೆ.ಬಿ.ಪವನ್ ಬಳಿ ಕ್ರಿಕೆಟ್ ಬಗ್ಗೆ ವಿಶೇಷ ತರಬೇತಿ ಪಡೆದುಕೊಂಡಿದ್ದರು.
ಕಳೆದ 8 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರ ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.
ಉಳಿದಂತೆ, ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರಿದ್ದಾರೆ. ಚಿತ್ರಕ್ಕೆ ಪಿ.ಆರ್.ಸಂಸ್ಥೆ ಸಪೋರ್ಟ್ ಸಿಕ್ಕಿದೆ. ಆಡಿಯೋ ಹಕ್ಕನ್ನು ಕೂಡಾ ಇದೇ ಸಂಸ್ಥೆ ಪಡೆದುಕೊಂಡಿದೆ. ಕೆ.ಆರ್.ಜಿ ಸಂಸ್ಥೆ ವಿತರಣೆ ಮಾಡುತ್ತಿದೆ.
![RCB CRICKETER WOMEN CRICKETER SANDAL WOOK](https://etvbharatimages.akamaized.net/etvbharat/prod-images/27-05-2024/kn-bng-01-kannadadli-bartha-eide-women-crickter-storya-cinema-7204735_27052024101703_2705f_1716785223_627.jpg)
ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಇದೆ. ಮಂಡ್ಯದ ಹುಡುಗಿಯ ಕ್ರಿಕೆಟ್ ಕನಸಿನ ಕಥೆಯನ್ನು ಅವರು ನಿರೂಪಿಸಿದ್ದಾರೆ. ಆಂಥೋನಿ ರುತ್ ವಿನ್ಸೆಂಟ್ ಕ್ಯಾಮೆರಾ ವರ್ಕ್ ಮಾಡಿದ್ದು, ಸೂರಜ್ ಜೋಯಿಸ್ ಸಂಗೀತವಿದೆ. ಥ್ರಿಲ್ಲರ್ ಮಂಜು ಸಾಹಸ, ಸಂತೋಷ್ ಶೇಖರ್ ಕೊರಿಯೋಗ್ರಫಿ ಮಾಡಿದ್ದಾರೆ.
ಇದನ್ನೂ ಓದಿ: ಕೇನ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ನಿರ್ದೇಶಕಿ ಪಾಯಲ್ ಕಪಾಡಿಯಾ - Payal Kapadia