ಬೆಂಗಳೂರು: ಹಾಡುಗಳ ಕೃತಿಸ್ವಾಮ್ಯ ಪಡೆಯದೇ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಬಳಸಿರುವ ಆರೋಪದಡಿ ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಹಾಗೂ ಅವರ ಮಾಲಿಕತ್ವದ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಂ. ಆರ್. ಟಿ. ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ .ಎಂ. ಎಂಬುವವರು ನೀಡಿರುವ ದೂರಿನ ಅನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂ.ಆರ್.ಟಿ. ಕಂಪನಿಯು ಸಿನಿಮಾದ ಹಾಡು, ಆಲ್ಬಂ ಹಾಡು ಹಾಗೂ ಇತ್ಯಾದಿ ಹಾಡುಗಳ ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನು ಹೊಂದಿದೆ.
ತಾವು ನಿರ್ಮಾಣ ಮಾಡುತ್ತಿರುವ ಬ್ಯಾಚುಲರ್ ಪಾರ್ಟಿ ಸಿನಿಮಾಗಾಗಿ ಎಂ.ಆರ್.ಟಿ ಮ್ಯೂಸಿಕ್ ಕಂಪನಿಯ ಒಡೆತನದ "ನ್ಯಾಯ ಎಲ್ಲಿದೆ'' ಹಾಗೂ "ಗಾಳಿ ಮಾತು" ಸಿನಿಮಾಗಳ ಹಾಡುಗಳನ್ನು ಬಳಕೆ ಮಾಡಲು ರಾಜೇಶ್ ಎಂಬುವವರ ಮೂಲಕ ರಕ್ಷಿತ್ ಶೆಟ್ಟಿಯವರು ಇದೇ ವರ್ಷ ಜನವರಿಯಲ್ಲಿ ಅನುಮತಿ ಕೇಳಿದ್ದರಂತೆ. ಆದರೆ, ಮಾತುಕತೆಯು ಸರಿಹೊಂದದೇ ಇದ್ದುದರಿಂದ ವ್ಯವಹಾರ ಮುಂದುವರೆಸಿರಲಿಲ್ಲ.
ಆದರೆ, ಇತ್ತೀಚಿಗೆ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿರುವ ಬ್ಯಾಚುಲರ್ ಪಾರ್ಟಿ ಸಿನಿಮಾವನ್ನು ನೋಡಿದಾಗ, "ನ್ಯಾಯ ಎಲ್ಲಿದೆ" ಸಿನಿಮಾದ "ನ್ಯಾಯಾ ಎಲ್ಲಿದೆ', ಹಾಗೂ 'ಗಾಳಿ ಮಾತು" ಚಲನಚಿತ್ರದ "ಒಮ್ಮೆ ನಿನ್ನನ್ನು" ಹಾಡುಗಳನ್ನು ಅನಧಿಕೃತವಾಗಿ ಬಳಕೆ ಮಾಡಿರುವುದು ಕಂಡು ಬಂದಿದೆ ಎಂದು ಆರೋಪಿಸಲಾಗಿದೆ.
ಅನುಮತಿ ಪಡೆಯದೇ ತಮ್ಮ ಹಕ್ಕುಸ್ವಾಮ್ಯದ ಹಾಡುಗಳನ್ನು ಬಳಸುವ ಮೂಲಕ ಪರಂವಾ ಸ್ಟುಡಿಯೋಸ್ ಹಾಗೂ ರಕ್ಷಿತ್ ಶೆಟ್ಟಿಯವರು ಕಾಪಿರೈಟ್ಸ್ ಉಲ್ಲಂಘಿಸಿದ್ದಾರೆ ಹಾಗೂ ಎಂ.ಆರ್.ಟಿ ಮ್ಯೂಸಿಕ್ ಕಂಪನಿಗೆ ಮೋಸ ಮಾಡಲಾಗಿದೆ ಎಂದು ನವೀನ್ ಕುಮಾರ್ ಅವರು ದೂರು ನೀಡಿದ್ದಾರೆ.
ದೂರಿನನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಸೆಂಚುರಿ ಸ್ಟಾರ್ ಇಂಟ್ರೊಡಕ್ಷನ್ ಟೀಸರ್ ಬೊಂಬಾಟ್.. ಐ ಆಮ್ ಕಮಿಂಗ್ ಅಂತಿದ್ದಾರೆ ಶಿವರಾಜ್ಕುಮಾರ್ - Shivarajkumar