ಕಳೆದ ಗುರುವಾರ ಚಿತ್ರಮಂದಿರ ಪ್ರವೇಶಿಸಿದ ಫೈಟರ್ ಸಿನಿಮಾದ ಗಳಿಕೆ ಉತ್ತಮವಾಗಿದೆ. ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರೋ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಈ ಸಿನಿಮಾ ಉತ್ತಮ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಅದಾಗ್ಯೂ ಹಿಂದಿನ ನಾಲ್ಕು ದಿನಗಳ ಕಲೆಕ್ಷನ್ಗೆ ಹೋಲಿಸಿದರೆ, ಮೊದಲ ಸೋಮವಾರದ ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಬಿಡುಗಡೆಯಾದ ಐದು ದಿನಗಳಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 126 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಬಹುದಿನಗಳಿಂದ ಸದ್ದು ಮಾಡಿದ್ದ ಫೈಟರ್ ಸಿನಿಮಾ ಜನವರಿ 25 ರಂದು ಬಿಡುಗಡೆ ಆಯಿತು. ತೆರೆಕಂಡ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 22.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಎರಡನೇ ದಿನ ಗಣರಾಜ್ಯೋತ್ಸವ ರಜೆಯ ಲಾಭ ಪಡೆದ ಚಿತ್ರ 39.5 ಕೋಟಿ ರೂಪಾಯಿ ಸಂಪಾದಿಸಿತು. ಮೂರನೇ ದಿನ 27.5 ಕೋಟಿ ರೂ., ನಾಲ್ಕನೇ ದಿನ 29 ಕೋಟಿ ರೂ. ಕಲೆಕ್ಷನ್ ಮಾಡಿತು. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಫೈಟರ್ ತನ್ನ ಐದನೇ ದಿನ ಅಂದರೆ ಸೋಮವಾರ ಭಾರತದಲ್ಲಿ ಸುಮಾರು 8 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 126.5 ಕೋಟಿ ರೂ. ಗಳಿಸಿದೆ.
ದೀಪಿಕಾ ಮತ್ತು ಹೃತಿಕ್ ಅವರಲ್ಲದೇ ಫೈಟರ್‌ನಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಥವಾ ಪ್ಯಾಟಿ ಪಾತ್ರ, ದೀಪಿಕಾ ಪಡುಕೋಣೆ ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ ಅಥವಾ ಮಿನ್ನಿ ಪಾತ್ರ ಮತ್ತು ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಥವಾ ರಾಕಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಎಲ್ಲರೂ ತಮ್ಮ ದೇಶಕ್ಕಾಗಿ ಹೋರಾಡಿದ್ದಾರೆ. 'ಫೈಟರ್' ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಸಲ್ಲಿಸುತ್ತಿರುವ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ: ಶಾರುಖ್ ಖಾನ್ ಜೊತೆ ಯಶ್ ಸಿನಿಮಾ? ರಾಕಿಂಗ್ ಸ್ಟಾರ್ ಆಪ್ತರು ಹೀಗಂತಾರೆ
ಫೈಟರ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಸಕಾರಾತ್ಮಕ ವಿಮರ್ಶೆ ಸ್ವೀಕರಿಸಿರುವ ಈ ಸಿನಿಮಾವನ್ನು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹಯೋಗದೊಂದಿಗೆ ವಯಾಕಾಮ್18 ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಇನ್ನು ಹೃತಿಕ್ ರೋಷನ್ ಮುಂಬರುವ ದಿನಗಳಲ್ಲಿ ಅಯಾನ್ ಮುಖರ್ಜಿ ನಿರ್ದೇಶನದ ವಾರ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2019ರ ವಾರ್‌ನ ಸೀಕ್ವೆಲ್ ಇದಾಗಿದ್ದು, ಆರ್ಆರ್ಆರ್ ಖ್ಯಾತಿಯ ನಟ ಜೂನಿಯರ್ ಎನ್ಟಿಆರ್ ಕೂಡ ನಟಿಸಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಮತ್ತೊಂದೆಡೆ, ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 ಎಡಿ ಇದೇ ಸಾಲಿನಲ್ಲಿ ಬಿಡುಗಡೆಗೊಳ್ಳಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: 'ಸಾರಾಂಶ'ದ ನಶೆಯೋ ನಕಾಶೆಯೋ ಹಾಡಿಗೆ ಶೃತಿ ಹರಿಹರನ್ ನೃತ್ಯ