ಸೆಲೆಬ್ರಿಟಿ ಮಕ್ಕಳು ಹಾಗೂ ಮೊಮ್ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸತೇನಲ್ಲ. ಇದೀಗ ಡಾ. ರಾಜ್‌ಕುಮಾರ್ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ 'ಮಿಂಚುಹುಳ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಈ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೂ ಸಜ್ಜಾಗಿದೆ.
ಮಹೇಶ್ ಕುಮಾರ್ ಎಂಬುವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ನಾದಬ್ರಹ್ಮ ಹಂಸಲೇಖ, ಹಿರಿಯನಟಿ ಜಯಮಾಲಾ, ನಿರ್ದೇಶಕ ಪಿ.ಶೇಷಾದ್ರಿ, ಲಹರಿ ವೇಲು, ಶಾಸಕ ಶರತ್ ಬಚ್ಚೇಗೌಡ, ಚಿಂತಕ ಪ್ರೊ. ರಾಜಪ್ಪ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಅಲ್ಲದೆ ಹಿರಿಯ ನಿರ್ಮಾಪಕ ಎಸ್. ಎ. ಚಿನ್ನೇಗೌಡ್ರು, ದೊಡ್ಡಹುಲ್ಲೂರು ರುಕ್ಕೋಜಿರಾವ್, ರಾಜ್ ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಚಿತ್ರವನ್ನು ವೀಕ್ಷಿಸಿದರು.
![Dr. Rajkumar's relative Prithviraj entered Sandalwood](https://etvbharatimages.akamaized.net/etvbharat/prod-images/28-09-2024/kn-bng-03-drraju-brother-varadappa-mommaga-cinemage-entry-7204735_27092024223448_2709f_1727456688_884.jpg)
''ನಗರ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದೆ. ಬೇಜವಾಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆಯನ್ನು ಇಲ್ಲಿ ಹೆಣೆಯಲಾಗಿದೆ. ಆ ತಂದೆಯ ಬದುಕಿನ ವೈರುದ್ಯ, ಅಪ್ಪ-ಮಕ್ಕಳು ಬಾಡಿಗೆ ಕಟ್ಟಲಾಗದೇ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ. ಆದರೆ, ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. 'ಮಿಂಚುಹುಳು'ವೊಂದನ್ನು ನೋಡಿದ ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ. ಅದು ಏನು ಎಂಬುದೇ 'ಮಿಂಚುಹುಳು' ಚಿತ್ರದ ಕಥಾಹಂದರ. ಈ ಚಿತ್ರ ಆಗಲು ಪುನೀತ್ ರಾಜ್‌ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಕಂಟೆಂಟ್ ಓರಿಯೆಂಟ್ ಚಿತ್ರಗಳ ಅಗತ್ಯತೆ ತುಂಬಾ ಇದೆವೆಂದು ಅವರು ಆಗಾಗ ಹೇಳುತ್ತಿದ್ದರು. ಅಂತಹದ್ದೇ ಮತ್ತೊಂದು ಚಿತ್ರವಿದು. ಒಳ್ಳೇ ಸಿನಿಮಾನ ಬೆಂಬಲಿಸಿ'' ಎಂದು ಚಿತ್ರ ಪ್ರದರ್ಶನದ ನಂತರ ನಿರ್ದೇಶಕ ಮಹೇಶ್ ಕುಮಾರ್ ಸಿನಿ ಪ್ರೇಮಿಗಳಲ್ಲಿ ಮನವಿ ಮಾಡಿದರು.
![Dr. Rajkumar's relative Prithviraj entered Sandalwood](https://etvbharatimages.akamaized.net/etvbharat/prod-images/28-09-2024/kn-bng-03-drraju-brother-varadappa-mommaga-cinemage-entry-7204735_27092024223448_2709f_1727456688_603.jpg)
ಬಾಲನಟ ಪ್ರೀತಂ ಕೊಪ್ಪದ ಮಾತನಾಡಿ, ನಮ್ಮ ಚಿತ್ರ ಅ. 4ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ ಸಹಕರಿಸಿ ಎಂದು ತಮ್ಮ ಪಾತ್ರ ಪರಿಚಯಿಸಿಕೊಂಡರು.
ನಟ ಪೃಥ್ವಿರಾಜ್ ಮಾತನಾಡಿ, ಚಿತ್ರದಲ್ಲಿ ನನ್ನದು ಮುಖ್ಯ ಪಾತ್ರಕ್ಕೆ ಪೂರಕವಾಗಿ ನಿಲ್ಲುವ ಪಾತ್ರ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ, ಬೆಂಬಲ ಬೇಕು ಎಂದು ಕೇಳಿಕೊಂಡರು.
![Dr. Rajkumar's relative Prithviraj entered Sandalwood](https://etvbharatimages.akamaized.net/etvbharat/prod-images/28-09-2024/kn-bng-03-drraju-brother-varadappa-mommaga-cinemage-entry-7204735_27092024223448_2709f_1727456688_463.jpg)
ಹಿರಿಯ ನಟಿ ಜಯಮಾಲಾ ಮಾತನಾಡಿ, ವರದಪ್ಪ ಮತ್ತು ಅವರ ಅಳಿಯ ಮಕ್ಕಳ ಚಿತ್ರಕ್ಕೆ ಕೈ ಹಾಕಿದ್ದಾರೆ. ಪೃಥ್ವಿರಾಜ್ ಸೊಗಸಾಗಿ ನಟಿಸಿದ್ದಾನೆ. ಮಕ್ಕಳು ಯಾವ ರೀತಿ ವಿಕಾಸ ಹೊಂದುತ್ತಾರೆ ಅನ್ನೋದನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಮಕ್ಕಳ ಚಿತ್ರಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು ಎಂದರು.
ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಈ ಸಿನಿಮಾ ನೋಡುವಾಗ ನನಗೆ ಪಂತುಲು ನೆನಪಾದರು. ಸಮಸ್ಯೆಗಳ ನಡುವೆ ಆ ಮಗು ಬೆಳೆಯಲು ಹೊರಟಿದ್ದು ಖುಷಿಯಾಯ್ತು. ಮಕ್ಕಳ ಮುಂದೆ ಸವಾಲುಗಳನ್ನು ಇಡಿ, ಅವರಿಗೆ ಕುತೂಹಲ ಬೆಳೆಸಿ, ಅವರು ಕೇಳದೆ ಏನನ್ನೂ ಕೊಡಬೇಡಿ. ವರದಪ್ಪ ಅವರು ಒಂದು ಭಾಷಣ ಮಾಡಿದ್ದು ನಾನು ಎಂದೂ ನೋಡಿಲ್ಲ. ಹಿಂದೆನಿಂತು ನೋಡಿಕೊಳ್ತಿದ್ದರು. ರಾಜಣ್ಣ ಅವರನ್ನು ಭೂಮಿತೂಕದ ವ್ಯಕ್ತಿ ಅಂತಿದ್ದರು. ಈಗ ಅವರ ಮೊಮ್ಮಗ ಬೇರಿನೆಡೆಗೆ ಹೊರಟಿದ್ದಾನೆ ಎಂದು ಹೇಳಿದರು.
![Dr. Rajkumar's relative Prithviraj entered Sandalwood](https://etvbharatimages.akamaized.net/etvbharat/prod-images/28-09-2024/kn-bng-03-drraju-brother-varadappa-mommaga-cinemage-entry-7204735_27092024223448_2709f_1727456688_342.jpg)
ನಿರ್ದೇಶಕ ಪಿ.ಶೇಷಾದ್ರಿ ಮಾತನಾಡುತ್ತ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಿನಿಮಾ ತೋರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರ ಅನುಮತಿ ಕೊಡಬೇಕು. ನೂರು ಮಕ್ಕಳು ಈ ಸಿನಿಮಾ ನೋಡಿದರೆ ಅದರಲ್ಲಿ ಹತ್ತು ಮಕ್ಕಳ ಮನೋಭಾವ ಬದಲಾಗುತ್ತೆ. ಮುಖ್ಯವಾಗಿ ದೊಡ್ಡವರು ಈ ಸಿನಿಮಾ ನೋಡಬೇಕು ಎಂದು ಹೇಳಿದರು.
ಲಹರಿ ಸಂಸ್ಥೆಯ ವೇಲು, ನಿವೃತ್ತ ಪ್ರಾಧ್ಯಾಪಕ ಪ್ರೊ ರಾಜಪ್ಪ ದಳವಾಯಿ, ಶಾಸಕ ಶರತ್ ಬಚ್ಚೇಗೌಡ, ಕಾರ್ಯಕಾರಿ ನಿರ್ಮಾಪಕ ವಿಜಯ್ ಕುಮಾರ್, ಸಹ ನಿರ್ಮಾಪಕ ರಫೀಕ್ ಉಲ್ಲಾ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.
ಈ ಚಿತ್ರಕ್ಕೆ ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ಅವರು ಬಂಡವಾಳ ಹಾಕಿದ್ದು, ವಿಜಯ್ ಕುಮಾರ್ ಮತ್ತು ಅಬ್ದುಲ್ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ. ಅಣ್ಣಾವ್ರ ಆತ್ಮೀಯರಾದ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ತಮ್ಮ ಊರಿನವರೇ ಆದ ನಿರ್ಮಾಪಕರ ಜೊತೆ ಹೆಗಲಾಗಿ ನಿಂತು ಈ ಚಿತ್ರ ನಿರ್ಮಾಣದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಅಕ್ಟೊಬರ್ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.